ರಾಮ್ ದೇವ್ ವಿರುದ್ಧ ಅರೆಸ್ಟ್ ವಾರಂಟ್

Update: 2017-06-15 04:03 GMT

ಚಂಡೀಗಢ, ಜೂ. 15: ಜಾಟ್ ಹೋರಾಟದ ವೇಳೆ ಹಿಂಸಾತ್ಮಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿದ್ದ ರೋಹ್ಟಕ್‌ನಲ್ಲಿ ನಡೆದ ಸದ್ಭಾವನಾ ಸಮ್ಮೇಳನದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರದ ಪ್ರಚಾರ ರಾಯಭಾರಿ ಹಾಗೂ ಯೋಗಗುರು ಬಾಬಾ ರಾಮ್‌ದೇವ್ ವಿರುದ್ಧ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

"ಈ ದೇಶದ ಕಾನೂನನ್ನು ಮತ್ತು ಸಂವಿಧಾನವನ್ನು ನಾವು ಗೌರವಿಸುತ್ತೇವೆ. ಇಲ್ಲದಿದ್ದರೆ ಯಾರಾದರೂ ಭಾರತ ಮಾತೆಗೆ ಅವಮಾನ ಮಾಡಿದರೆ ಒಬ್ಬರನ್ನಲ್ಲ; ಸಾವಿರ, ಲಕ್ಷ ಮಂದಿಯನ್ನು ಶಿರಚ್ಛೇದ ಮಾಡುವ ಸಾಮರ್ಥ್ಯ ನಮಗಿದೆ" ಎಂದು 2016ರ ಏಪ್ರಿಲ್ 3ರಂದು ಬಾಬಾ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಹರ್ಯಾಣದ ರೋಹ್ಟಕ್‌ನಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಸದ್ಭಾವನಾ ಸಮ್ಮೇಳನದಲ್ಲಿ ರಾಮ್‌ದೇವ್ ಈ ಹೇಳಿಕೆ ನೀಡಿದ್ದರು.

ರೋಹ್ಟಕ್‌ನ ಹೆಚ್ಚುವರಿ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಗೋಯಲ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುನ್ನ ರಾಮ್‌ದೇವ್ ವಿರುದ್ಧ ಜಾಮೀನು ಪಡೆಯಬಹುದಾದ ವಾರಂಟ್ ಮತ್ತು ಸಮನ್ಸ್ ಹೊರಡಿಸಿದ್ದರು. ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು. ಪ್ರಚೋದಿಸುವುದು ಶಾಂತಿಭಂಗ ಹಾಗೂ ಅಪರಾಧ ಕೃತ್ಯದ ಸಂಚಿನ ಕಾರಣಕ್ಕಾಗಿ ಬಾಬಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಎರಡೂ ಬಾರಿ ಬಾಬಾ ರಾಮ್‌ದೇವ್ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರ ಈ ವಾರಂಟ್ ಜಾರಿಗೊಳಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 3ರಂದು ನಡೆಯಲಿದೆ. ಹರ್ಯಾಣದ ಗೃಹವ್ಯವಹಾರಗಳ ಖಾತೆಯ ಮಾಜಿ ರಾಜ್ಯ ಸಚಿವ ಸುಭಾಷ್ ಬಾತ್ರಾ ಅವರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪೊಲೀಸರ ಬಳಿ ದೂರು ನೀಡಿದಾಗ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಮ್‌ದೇವ್ ಅವರನ್ನು ರಾಜ್ಯದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News