ತಡರಾತ್ರಿ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರು: ಆರೋಪ

Update: 2017-06-15 06:00 GMT

ನಾಲ್ವರು ಮಹಿಳೆಯರ ಸಹಿತ ಐದು ಮಂದಿ ಆಸ್ಪತ್ರೆಗೆ ದಾಖಲು

ಮಂಗಳೂರು, ಜೂ. 15: ಕಲ್ಲಡ್ಕದಲ್ಲಿ ಯುವಕನ ಮೇಲೆ ನಡೆದ ಚೂರಿ ಇರಿತ ಘಟನೆಯ ಬಳಿಕ ವಿಚಾರಣೆಯ ನೆಪದಲ್ಲಿ ಬುಧವಾರ ರಾತ್ರಿ ಕಲ್ಲಡ್ಕದ ಮಾಣಿಮಜಲು, ಕೆ.ಸಿ.ರೋಡ್ ಮೊದಲಾದ ಕಡೆ ಮನೆಗಳಿಗೆ ಅಕ್ರಮ ಪ್ರವೇಶಗೈದ ಪೊಲೀಸರು, ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ನಾಲ್ವರು ಮಹಿಳೆಯರ ಸಹಿತ ಐದು ಮಂದಿ ಗುರುವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲ್ಲಡ್ಕ ಕೆ.ಸಿ.ರೋಡ್ ನಿವಾಸಿ ನಫೀಸಾ (52), ಅವರ ಮಗ ಮುಸ್ತಫಾ, ಕಲ್ಲಡ್ಕದ ನಿವಾಸಿ ಮೈಮೂನಾ (50), ಕಲ್ಲಡ್ಕ ಮಾಣಿಮಜಲ್ ನಿವಾಸಿಗಳಾದ ರುಖಿಯ್ಯ (53) ಮತ್ತು ಮರಿಯಮ್ಮ (50) ಆಸ್ಪತ್ರೆಗೆ ದಾಖಲಾದವರು.

ಕಲ್ಲಡ್ಕದಲ್ಲಿ ಯುವಕನೋರ್ವನಿಗೆ ಚೂರಿ ಇರಿತ ಘಟನೆ ನಡೆದ ಬಳಿಕ ಪೊಲೀಸರು ಮನೆಗಳಿಗೆ ನುಗ್ಗಿ ಗೂಂಡಾಗಿರಿಯನ್ನು ಪ್ರದರ್ಶಿಸಿದ್ದಾರೆ. ಹೆಂಗಸರು, ವೃದ್ಧರೆನ್ನದೆ ಮನೆ ಮಂದಿಯನ್ನು ಅವಾಚ್ಯವಾಗಿ ನಿಂದಿಸಿ, ಅವಮಾನ ಮಾಡಿದ್ದಾರೆ. ಮನೆಗಳಿಗೆ ನುಗ್ಗಿದ ಪೊಲೀಸರು ಹೆಂಗಸರನ್ನು ದೂಡಿ ಹಾಕಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆರು ಆರೋಪ ಮಾಡಿದ್ದಾರೆ.

ಬಿ.ಸಿ.ರೋಡ್ ನಗರ ಠಾಣಾ ಎಸ್‌ಐ ರಕ್ಷಿತ್ ಗೌಡ, ಪೊಲೀಸ್ ಸಿಬ್ಬಂದಿಯಾದ ಲಕ್ಷ್ಮಣ್, ವಿಜಯ ಕೃಷ್ಣ, ಅಮಾನುಲ್ಲಾ, ಅಬ್ದುರ್ರಹ್ಮಾನ್, ಉದಯ ಕುಮಾರ್ ಭಟ್, ರಾಜೇಶ್ ಎಂಬವರು ಮನೆಗೆ ಅಕ್ರಮ ಪ್ರವೇಶಿಸಿದ ಪೊಲೀಸರು ಎಂದು ಮನೆಮಂದಿ ಆರೋಪ ಮಾಡಿದ್ದಾರೆ.

ಕಲ್ಲಡ್ಕದಲ್ಲಿ ಏನೇ ನಡೆದರೂ ಪೊಲೀಸರಿಗೆ ನನ್ನ ಮನೆಯೇ ಟಾರ್ಗೆಟ್: ರುಖಿಯ್ಯ

"ಕಲ್ಲಡ್ಕ ಜಂಕ್ಷನ್ ಅಥವಾ ಆಸುಪಾಸಿನಲ್ಲಿ ಏನೇ ಗಲಾಟೆ ನಡೆದರೂ ಪೊಲೀಸರಿಗೆ ನನ್ನ ಮನೆಯೇ ಟಾರ್ಗೆಟ್. ಐವರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನಿರುವ ನನ್ನದು ಬಡ ಕುಟುಂಬ. ಗಂಡ ಜೀವನ ನಿರ್ವಹಣೆಗೆ ಬೀಡಿಗಳನ್ನು ಸಂಗ್ರಹ ಮಾಡುತ್ತಾರೆ. ಮಗ ವೃತ್ತಿಯಲ್ಲಿ ಕಾರು ಚಾಲಕ. ಬೆಳಗ್ಗೆ ಹೋದರೆ ಮನೆಗೆ ಬರುವಾಗ ಸಂಜೆ ಆಗುತ್ತದೆ. ಬಾಡಿಗೆ ಇದ್ದರೆ ರಾತ್ರಿ ತಡವಾಗಿ ಬರುತ್ತಾನೆ. ಐದು ಹೆಣ್ಣು ಮಕ್ಕಳೊಂದಿಗೆ ವಾಸಿಸುವ ನನ್ನ ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅರ್ಧರಾತ್ರಿಯಲ್ಲಿ ಬಂದು ಮೇಲಿಂದ ಮೇಲೆ ಬಾಗಿಲು ಬಡಿದರೆ ನಾನೇನು ಮಾಡಬೇಕು. ನನಗೆ ಮನೆಯಲ್ಲಿ ವಾಸಿಸಲು ತುಂಬಾ ಹೆದರಿಕೆಯಾಗುತ್ತಿದೆ" ಎಂದು ಕಲ್ಲಡ್ಕ ಮಾಣಿಮಜಲು ನಿವಾಸಿ ರುಖಿಯ್ಯಾ (53) ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಚೂರಿ ಇರಿತ ಘಟನೆಯ ನಂತರ ಮಂಗಳವಾರ ರಾತ್ರಿ 10 ಗಂಟೆಗೆ ಪೊಲೀಸರು ಮನೆಗೆ ಬಂದಿದ್ದರು. ಮಗನನ್ನು ಹುಡುಕಾಡಿ ಹೋಗಿದ್ದರು. ಮತ್ತೆ ಬುಧವಾರವೂ ರಾತ್ರಿ 12:30ಕ್ಕೆ ಮನೆಗೆ ಬಂದು ಬಾಗಿಲು ಬಡಿದರು. ನಾವು ಹೆದರಿಕೆಯಿಂದಲೇ ಬಾಗಿಲು ತೆರೆದಿದ್ದೇವೆ. ಗೂಂಡಾಗಳ ಹಾಗೆ ಬಾಗಿಲು ದೂಡಿ ಒಮ್ಮೆಲ್ಲೇ ಒಳಪ್ರವೇಶಿಸಿ "ನಿನ್ನ ಮಗ ನಝೀರ್ ಎಲ್ಲಿ" ಎಂದು ಪ್ರಶ್ನಿಸಿದರು. ಬಾಡಿಗೆಗೆ ಮಂಗಳೂರಿಗೆ ಹೋದವ ಮನೆಗೆ ಬಂದಿಲ್ಲ ಎಂದೆ. "ಎಲ್ಲಿ ಅಡಗಿಸಿಟ್ಟಿದ್ದೀಯಾ" ಎಂದು ಕೇಳಿದರು. ಮನೆಯಲ್ಲಿಲ್ಲ ಎಂದರೂ ಅವರು ನಂಬಲಿಲ್ಲ. ನನಗಿರುವುದು ಒಬ್ಬನೇ ಮಗ. ಅವನ ಪಾಲಿಗೆ ಅವನು ದುಡಿಯುತ್ತಿದ್ದಾನೆ. ಅವನನ್ನೇ ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರುಖಿಯ್ಯಾ ಆರೋಪಿಸಿದ್ದಾರೆ.

ನನ್ನನ್ನು ದೂಡಿ ಹಾಕಿ ಮಗನ ಕುತ್ತಿಗೆ ಹಿಡಿದು ಎಳೆದಾಡಿದರು: ನಫೀಸಾ

"ಗುರುವಾರ ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ಸುಮಾರು 10 ಮಂದಿಯ ಪೊಲೀಸರ ತಂಡ ನನ್ನ ಮನೆಗೆ ಬಂದು ಬಾಗಿಲು ಬಡಿದರು. ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರ ಪೈಕಿ ಐದಾರು ಮಂದಿ ಮನೆಯೊಳಗೆ ಪ್ರವೇಶಿಸಿದರು. "ನಿನ್ನ ಮಗ ಕುಲ್ಫಿ ಇಕ್ಬಾಲ್" ಎಲ್ಲಿ ಎಂದು ಕೇಳಿದರು. ಅಂತಹ ಹೆಸರಿನ ಯಾರೂ ನನ್ನ ಮನೆಯಲ್ಲಿಲ್ಲ ಎಂದು ಹೇಳಿದೆ. ಆದರೂ ಕೇಳದೆ ನನ್ನನ್ನು ದೂಡಿಹಾಕಿ, ನನ್ನ ಮಗ ಮುಸ್ತಫಾನ ಕುತ್ತಿಗೆ, ಅಂಗಿಯ ಕಾಲರ್ ಹಿಡಿದು ಎಳೆದಾಡಿದರು ಎಂದು ಕೆ.ಸಿ.ರೋಡ್ ನಿವಾಸಿ ನಫೀಸಾ (52) ಪೊಲೀಸ್ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ."

"ಪೊಲೀಸರು ನನ್ನನ್ನು ದೂಡಿದ್ದರಿಂದ ಓರ್ವ ಪೊಲೀಸ್ ಪೇದೆಯ ಕೈ ಕುತ್ತಿಗೆಗೆ ತಾಗಿ ಗಂಟಲಿನ ನೋವು ಅನುಭವಿಸುತ್ತಿದ್ದೇನೆ. ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ನನಗೆ ಗಂಟಲು ನೋವಿನಿಂದಾಗಿ ಶ್ವಾಸ ತೆಗೆಯಲು ಕಷ್ಟವಾಗುತ್ತಿದೆ. ಆದ್ದರಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದೇನೆ" ಎಂದರು.

ಕುತ್ತಿಗೆ ಹಿಡಿದು ಎಳೆದಾಡಿದರು, ಕಾಲು ಬೂಟಿನಿಂದ ಒದ್ದರು: ಮುಸ್ತಫಾ

"ಮನೆಯಲ್ಲಿದ್ದ ನನ್ನ ತಾಯಿ ನಫೀಸಾರನ್ನು ದೂಡಿ ಹಾಕಿ ನನ್ನ ಬಳಿ ಬಂದ ಪೊಲೀಸರು ಕುತ್ತಿಗೆ ಮತ್ತು ಶರ್ಟ್‌ನ ಕಾಲರ್ ಹಿಡಿದು ಎಳೆದಾಡಿದರು. ಶರ್ಟ್‌ನ್ನು ಹರಿದು ಹಾಕಿದರು. ಮತ್ತೋರ್ವ ಪೊಲೀಸ್ ಪೇದೆ ಒದ್ದರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಸ್ತಫಾ ಆರೋಪಿಸಿದ್ದಾರೆ.

"ನನ್ನ ತಾಯಿ ಮತ್ತು ನನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಬಳಿಕ ಮನೆಯಲ್ಲಿದ್ದ ನನ್ನ ಇನ್ನೋರ್ವ ಸಹೋದರ ಅಹ್ಮದ್ ಬಾವನನ್ನು ಅವಾಚ್ಯವಾಗಿ ನಿಂದಿಸಿದರು. ಅವನು ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ಮೂರು ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ. ಅವನ ಪಾಸ್‌ಪೋರ್ಟ್‌ಗಾಗಿ ಪೊಲೀರು ಹಠ ಮಾಡಿ ಮನೆಯಲ್ಲಿ ಕುಳಿತುಕೊಂಡರು. ಕೊನೆಗೂ ಒರಿಜಿನಲ್ ಪಾಸ್‌ಪೋರ್ಟ್ ಮತ್ತು ರೇಷನ್ ಕಾರ್ಡ್‌ನ ಝೆರಾಕ್ಸ್ ಅವರ ಕೈಗೆ ಕೊಟ್ಟ ಮೇಲೆಯೇ ಅವರು ಮನೆಯಿಂದ ಹೊರಟು ಹೋದರು" ಎಂದು ಮುಸ್ತಫಾ ಘಟನೆಯನ್ನು ವಿವರಿಸಿದರು.

ಮನೆಮಂದಿಯನ್ನು ಬೆದರಿಸಿ, ನಿಂದಿಸಿದರು: ಮೈಮೂನಾ

"ಮನೆಯವರು ಮಸೀದಿಗೆ ತೆರಳಿ ಬಾರದೆ ಇದ್ದುದರಿಂದ ರಾತ್ರಿ ಸುಮಾರು 10 ಗಂಟೆಯವರೆಗೂ ಬಾಗಿಲು ತೆರೆದಿತ್ತು. ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಮಂದಿ ಪೊಲೀಸರು ಮನೆಯ ಮುಂದೆ ಸೇರಿ ಅದರಲ್ಲಿ ಕೆಲವರು ನೇರವಾಗಿ ಮನೆಗೆ ಪ್ರವೇಶಿಸಿದರು. ಮನೆಯೊಳಗೆ ಬಂದವರೇ ‘‘ಜಾಫರ್ .....ಮಗ ಎಲ್ಲಿ’’ ಎಂದು ಕೇಳಿದರು. ಮನೆಯಲ್ಲಿ ಇಲ್ಲ ಎಂದಾಗ... ‘ಹೇಳದಿದ್ದರೆ ನಿನ್ನ ಗಂಡನನ್ನು ಹೊತ್ತೊಯ್ಯುತ್ತೇವೆ’ ಎಂದು ಬೆದರಿಸಿದರು. 24 ದಿನದ ಬಾಣಂತಿ ನನ್ನ ಮಗಳು ಈ ಬಗ್ಗೆ ಪೊಲೀಸರನ್ನು ಕುರಿತು "ನನ್ನ ವೃದ್ಧ ತಂದೆಯನ್ನು ಯಾಕೆ ಕರೆದುಕೊಂಡು ಹೋಗುತ್ತೀರಿ" ಎಂದು ಕೇಳಿದಾಗ ಪೊಲೀಸರು ಆಕೆಯನ್ನು ದೂಡಿ ಹಾಕಲು ಮುಂದಾಗಿದ್ದು, "ನಿನ್ನನ್ನು ಠಾಣೆಗೆ ಒಯ್ಯಲು ನಾವೇ ಸಾಕು. ಮಹಿಳಾ ಪೊಲೀಸರ ಅಗತ್ಯವಿಲ್ಲ" ಎಂದು ನಿಂದಿಸಿರುವುದಾಗಿ ಕಲ್ಲಡ್ಕದ ನಿವಾಸಿ ಮೈಮೂನಾ (50) ಆರೋಪ ಮಾಡಿದ್ದಾರೆ.

ಪೊಲೀಸರು ಬಾಗಿಲು ಬಡಿದು ಹೃದಯ ಬಡಿತ ಹೆಚ್ಚಿಸಿದರು!: ಹೃದ್ರೋಗಿ ಮರಿಯಮ್ಮ ಅಳಲು

"ರಾತ್ರಿ ಸುಮಾರು 12:30ಕ್ಕೆ ಪೊಲೀಸರು ಮನೆಗೆ ಬಂದು ಬಾಗಿಲು ಬಡಿದರು. ಮೇಲಿಂದ ಮೇಲೆ ಅವರು ಬಾಗಿಲು ಹೊಡೆಯುವ ಶಬ್ದಕ್ಕೆ ನನ್ನ ಗಂಡ ಬಾಗಿಲು ತೆರೆದರು. ಒಮ್ಮೆಲೇ ಐದಾರು ಮಂದಿ ಮನೆಯೊಳಗೆ ಪ್ರವೇಶಿಸಿದರು. ಇದನ್ನು ನೋಡಿ ಹೆದರಿಕೆಯಾಯಿತು. ಹೃದಯ ಬಡಿತ ಜೋರಾಯಿತು. ಅಲ್ಲೇ ಕುಸಿದು ಬಿದ್ದೆ" ಎಂದು ಮಾಣಿಮಜಲ್ ನಿವಾಸಿ ಮರಿಯಮ್ಮ (50) ಹೇಳಿದರು.

"ನನಗೆ ಹೃದಯ ಸಂಬಂಧಿ ರೋಗವಿದೆ. ಬಿಪಿ ಪೇಷಂಟ್ ಬೇರೆ. ಎದೆ ನೋವು, ನಿತ್ರಾಣದಿಂದ ಬಳಲುತ್ತಿದ್ದೇನೆ. ಪೊಲೀಸರು ಬಾಗಿಲು ಬಡಿಯುವ ಶಬ್ದವನ್ನು ಕೇಳಲು ಸಾಧ್ಯವಾಗಲಿಲ್ಲ. ಮನೆಯೊಳಗೆ ಬಂದವರೇ "ನಿನ್ನ ಮಗ ರಶೀದ್" ಎಲ್ಲಿ ಎಂದು ಕೇಳಿದರು. ಅವರನ್ನು ನೋಡಿ ಹೆದರಿ ,ಅಲ್ಲೇ ಕುಸಿದು ಬಿದ್ದ ನನ್ನನ್ನು ನನ್ನ ಸೊಸೆ ಎತ್ತಿಕೊಂಡು ಕೊಠಡಿಗೆ ಕರೆದುಕೊಂಡು ಹೋದರು. ನನ್ನ ಮಗ ಮರದ ಕೆಲಸ ಸಹಿತ ಕೂಲಿ ಕೆಲಸ ಮಾಡಿ ಮನೆಯ ಖರ್ಚನ್ನು ನೋಡಿಕೊಳ್ಳುತ್ತಾನೆ. ಅವನ ಮೇಲೆ ಯಾವುದೇ ದೂರು ಇಲ್ಲ. ಆದರೂ ಪೊಲೀಸರು ಆತನ ಹಿಂದೆ ಬಿದ್ದಿದ್ದಾರೆ. ಪೊಲೀಸರ ನಡೆಯಿಂದಾಗಿ ರಾತ್ರಿಯಿಂದಲೇ ಬಿಪಿ ಹೆಚ್ಚಾಗಿತ್ತು. ಬೆಳಗ್ಗಿನವರೆಗೆ ಕಾದು 6 ಗಂಟೆ ಹೊತ್ತಿಗೆ ಮನೆಯಿಂದ ಹೊರಟವಳೇ ಆಸ್ಪತ್ರೆಗೆ ದಾಖಲಾಗಿದ್ದೇನೆ" ಎಂದು ಮರಿಯಮ್ಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News