ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಕಳೆದ ವರ್ಷ ಕಳಿಸಿದ ಹಣ ಎಷ್ಟು ಗೊತ್ತೇ?
ನ್ಯೂಯಾರ್ಕ್,ಜೂ.15: ವಿಶ್ಯಾದ್ಯಂತ ದುಡಿಯುತ್ತಿರುವ ಭಾರತೀಯರು ಕಳೆದ ವರ್ಷ ಸ್ವದೇಶಕ್ಕೆ 62.7 ಶತಕೋಟಿ ಡಾಲರ್‌ಗಳನ್ನು ರವಾನಿಸಿದ್ದಾರೆ. ತನ್ಮೂಲಕ ಭಾರತವು ಚೀನಾವನ್ನೂ ಹಿಂದಿಕ್ಕಿ ವಿಶ್ವದಲ್ಲಿಯೇ ಈ ರೀತಿ ಅತಿ ಹೆಚ್ಚಿನ ಆದಾಯವನ್ನು ಗಳಿಸುತ್ತಿ ರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ಕೃಷಿ ಅಭಿವೃದ್ಧಿಗಾಗಿ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನಿಧಿ(ಐಎಫ್‌ಎಡಿ)ಯು ನಡೆಸಿದ ‘ಒನ್ ಫ್ಯಾಮಿಲಿ ಅಟ್ ಎ ಟೈಮ್’ ಅಧ್ಯಯನವು 2016ರಲ್ಲಿ ವಿಶ್ವಾದ್ಯಂತ ಸುಮಾರು 200 ಮಿಲಿಯ ವಲಸಿಗರು ತಮ್ಮ ಕುಟುಂಬಗಳಿಗೆ 445 ಬಿಲಿಯನ್ ಡಾ.ಗೂ ಅಧಿಕ ಹಣವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದೆ. ಈ ಹಣದ ಮೊತ್ತ ಕಳೆದೊಂದು ದಶಕದಿಂದ ವಾರ್ಷಿಕ ಸರಾಸರಿ ಶೇ.4.2ರ ದರದಲ್ಲಿ ಏರಿಕೆಯಾಗುತ್ತಿದ್ದು, 2007ರಲ್ಲಿ 296 ಬಿ.ಡಾ.ಗಳಿದ್ದುದು 2016ರಲ್ಲಿ 445 ಬಿ.ಡಾ.ಗಳಿಗೆ ಹೆಚ್ಚಿದೆ. ಈ ಪೈಕಿ ಶೇ.80ರಷ್ಟು ಹಣ ಭಾರತ,ಚೀನಾ ಫಿಲಿಪ್ಪೀನ್ಸ್,ಮೆಕ್ಸಿಕೊ ಮತ್ತು ಪಾಕಿಸ್ತಾನ ಸೇರಿದಂತೆ 23 ದೇಶಗಳಿಗೆ ರವಾನೆಯಾಗಿದೆ. ವಾರ್ಷಿಕ ಮೊತ್ತದ ಅರ್ಧದಷ್ಟು ಹಣ ಅಮೆರಿಕ,ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ 10 ರಾಷ್ಟ್ರಗಳಿಂದ ವಿವಿಧೆಡೆಗಳಿಗೆ ರವಾನೆ ಯಾಗಿದೆ.
2016ರಲ್ಲಿ ಭಾರತವು 62.7 ಬಿ.ಡಾ.ಗಳನ್ನು ಸ್ವೀಕರಿಸಿದ್ದರೆ, ನಂತರದ ಸ್ಥಾನಗಳಲ್ಲಿ ಚೀನಾ(61 ಬಿ.),ಫಿಲಿಪ್ಪೀನ್ಸ್(30 ಬಿ.) ಮತ್ತು ಪಾಕಿಸ್ತಾನ(20 ಬಿ.)ಗಳಿವೆ.
ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಈ ಅಧ್ಯಯನವನ್ನು ನಡೆಸಲಾಗಿದೆ. 2007ರಲ್ಲಿ ಚೀನಾ 38.4 ಬಿ.ಡಾ.ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 37.2 ಬಿ.ಡಾ.ಗಳೊಡನೆ ಭಾರತವು ಎರಡನೇ ಸ್ಥಾನದಲ್ಲಿತ್ತು.
ವಲಸಿಗರ ಪೈಕಿ ಅತ್ಯಂತ ಹೆಚ್ಚು ಅಂದರೆ 77 ಮಿ.ಜನರು ಏಷ್ಯಾ ಮೂಲದವ ರಾಗಿದ್ದಾರೆ. ಈ ಪೈಕಿ 48 ಮಿ.ಜನರು ಏಷ್ಯಾ ಪ್ರದೇಶದಲ್ಲಿಯೇ ದುಡಿಯುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಏಷ್ಯಾ ಮತ್ತು ಪೆಸಿಫಿಕ್‌ಗಳಿಗೆ ಹಣ ರವಾನೆಯ ಪ್ರಮಾಣದಲ್ಲಿ ಶೇ.87ರಷ್ಟು ಏರಿಕೆಯಾಗಿ 244 ಬಿ.ಡಾ.ಗಳಿಗೆ ತಲುಪಿದೆಯಾದರೂ ವಲಸೆಯ ಪ್ರಮಾಣದಲ್ಲಿ ಕೇವಲ ಶೇ.33ರಷ್ಟು ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.