ಕಾಲಲ್ಲೇ ವಾಹನ ಚಲಾಯಿಸುವ ವಿಕ್ರಂ ಅಗ್ನಿಹೋತ್ರಿ

Update: 2017-06-15 17:28 GMT

ಇಂದೋರ್, ಜೂ.15: ತನ್ನ ಎರಡೂ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವ ಛಲಬಿಡದೆ, ಸವಾಲನ್ನು ಸ್ವೀಕರಿಸಿ ಈಗ ಕಾಲಲ್ಲೇ ವಾಹನ ಚಲಾಯಿಸುತ್ತಾ ಎಲ್ಲರ ಗಮನ ಸೆಳೆದಿರುವ ಘಟನೆಯಿದು.

ಇದೀಗ 45ರ ಹರೆಯದಲ್ಲಿರುವ ಇಂದೋರ್ ನಿವಾಸಿ ವಿಕ್ರಂ ಅಗ್ನಿಹೋತ್ರಿ 7 ವರ್ಷದ ಬಾಲಕನಿದ್ದಾಗ ತನ್ನ ತಾಯಿಯ ಜೊತೆ ಔತಣಕೂಟವೊಂದಕ್ಕೆ ತೆರಳಿದ್ದರು. ತಾಯಿಯ ಸ್ನೇಹಿತೆಯ ಮನೆಯಲ್ಲಿ ಔತಣ ಕೂಟ ಆಯೋಜಿಸಲಾಗಿತ್ತು. ಟೆರೇಸ್‌ನಲ್ಲಿ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದ ವಿಕ್ರಂ ಅಕಸ್ಮಾತ್ತಾಗಿ ಕಟ್ಟಡದ ಬದಿಯಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದ. ವಿದ್ಯುತ್ ಆಘಾತದಿಂದ ಆತ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ದ.

ಆದರೆ ಪೋಷಕರ ಬೆಂಬಲದಿಂದ ತನ್ನ ಅಂಗವೈಕಲ್ಯವನ್ನು ಮೀರಿ ನಿಲ್ಲುವ ಹುಮ್ಮಸ್ಸು ಬೆಳೆಸಿಕೊಂಡ ವಿಕ್ರಂ ಯಾರ ನೆರವೂ ಇಲ್ಲದೆ ಬ್ರಶ್‌ನಿಂದ ಹಲ್ಲುಜ್ಜುವ, ಮುಖ ತೊಳೆಯುವ, ಬಟ್ಟೆ ಬದಲಾಯಿಸುವ.. ಜೊತೆಗೆ ಬರೆಯುವುದನ್ನೂ ಕಲಿತುಕೊಂಡ. ಇವೆಲ್ಲವನ್ನೂ ತನ್ನ ಪಾದದ ಮೂಲಕ ನಡೆಸುತ್ತಿದ್ದ ವಿಕ್ರಂ..!

 ಇಷ್ಟಕ್ಕೇ ವಿಕ್ರಂ ಸಾಧನೆಯ ವಿವರ ನಿಲ್ಲುವುದಿಲ್ಲ. ಓರ್ವ ಉತ್ತಮ ಕ್ರೀಡಾಪಟುವಾಗಿ, ಫುಟ್‌ಬಾಲ್ ಆಟಗಾರನಾಗಿ, ಉತ್ತಮ ಈಜುಪಟುವಾಗಿ ಸಾಧಿಸಿ ತೋರಿಸಿದ ವಿಕ್ರಂ. ಆದರೆ ಇವರು ಸಾಧಿಸಬೇಕಾದ ಒಂದು ಕ್ಷೇತ್ರವಿತ್ತು.

ಎಲ್ಲವನ್ನೂ ಸ್ವಯಂ ಮಾಡುವ ನಾನು ವಾಹನ ಚಲಾಯಿಸಬಾರದೇಕೆ ಎಂಬ ಪ್ರಶ್ನೆಯನ್ನು ತಮ್ಮಲ್ಲೇ ಹಾಕಿಕೊಂಡರು ವಿಕ್ರಂ. ತನ್ನನ್ನು ಹೊರಗೆ ಕರೆದೊಯ್ಯುವ ಕಾರಿನ ಡ್ರೈವರ್ ಯಾವಾಗಲೂ ತಡವಾಗಿ ಆಗಮಿಸುತ್ತಿದ್ದ ಕಾರಣ ಸ್ನೇಹಿತರಲ್ಲಿ ‘ಲಿಫ್ಟ್’ ಕೇಳುವ ಅನಿವಾರ್ಯತೆ ಉಂಟಾಗುತ್ತಿತ್ತು. ಇದಕ್ಕೆ ವಾಹನ ಚಾಲನೆ ಕಲಿಯುವುದೇ ಸೂಕ್ತ ಪರಿಹಾರ ಎಂದು ನಿರ್ಧರಿಸಿದೆ ಎನ್ನುತ್ತಾರೆ ವಿಕ್ರಂ.

  ಆರಂಭದಲ್ಲಿ ಸ್ನೇಹಿತರ ಕಾರಿನಲ್ಲಿ ಡ್ರೈವಿಂಗ್ ಕಲಿಕೆ ಆರಂಭ. ಬಳಿಕ ತನಗೆಂದೇ ಕಾರೊಂದನ್ನು ಖರೀದಿಸಿದರು. ಈ ಕಾರಿಗೆ ಆ್ಯಕ್ಸಿಲೇಟರ್ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿತ್ತು. ಇದೀಗ ವಿಕ್ರಂ ತಮ್ಮ ಕಾಲುಗಳಿಂದಲೇ ವಾಹನ ಚಲಾಯಿಸಬಲ್ಲ ಓರ್ವ ನಿಷ್ಣಾತ ಡ್ರೈವರ್ ಆಗಿದ್ದಾರೆ.
ಕಾರು ಚಾಲನೆ ಮಾಡುವುದು ನನಗೆ ಅತ್ಯಾನಂದ ನೀಡುವ ಕಾರ್ಯವಾಗಿದೆ. ನನಗೆ ಕೈಗಳಿಲ್ಲ ಎಂದು ಯಾವತ್ತೂ ಕೊರಗದೆ ಆತ್ಮವಿಶ್ವಾಸದಿಂದ ಮುಂದಡಿ ಇಟ್ಟಿರುವುದು ಇಷ್ಟೆಲ್ಲಾ ಸಾಧಿಸಲು ಕಾರಣವಾಗಿದೆ ಎಂಬುದು ವಿಕ್ರಂ ಅವರ ಮನದಾಳದ ಮಾತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News