ಡಿ.31ರೊಳಗೆ ಆಧಾರ್ ಸಲ್ಲಿಸದಿದ್ದರೆ ಬ್ಯಾಂಕ್ ಖಾತೆ ನಿರ್ವಹಣೆ ಅಸಾಧ್ಯ

Update: 2017-06-16 12:55 GMT

ಹೊಸದಿಲ್ಲಿ,ಜೂ.16: ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು 50,000 ರೂ.ಹಾಗೂ ಹೆಚ್ಚಿನ ಹಣಕಾಸು ವ್ಯವಹಾರಕ್ಕೆ ಆಧಾರ್ ಸಂಖ್ಯೆಯನ್ನು ಸರಕಾರವು ಕಡ್ಡಾಯಗೊಳಿಸಿದೆ. ಹಾಲಿ ಬ್ಯಾಂಕ್ ಖಾತೆದಾರರು ಡಿ.31ರೊಳಗೆ ಆಧಾರ್ ಸಂಖ್ಯೆ ಯನ್ನು ತಮ್ಮ ಬ್ಯಾಂಕಿಗೆ ಸಲ್ಲಿಸುವಂತೆ ಸೂಚಿಸಲಾಗಿದ್ದು, ವಿಫಲಗೊಂಡರೆ ಅವರ ಖಾತೆ ಸ್ಥಗಿತಗೊಳ್ಳಲಿದೆ ಎಂದು ಕಂದಾಯ ಇಲಾಖೆಯ ಅಧಿಸೂಚನೆಯು ತಿಳಿಸಿದೆ.

ವ್ಯಕ್ತಿಗಳು ತೆರಿಗೆಗಳನ್ನು ತಪ್ಪಿಸಲು ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್‌ಗಳನ್ನು ಬಳಸುವುದಕ್ಕೆ ಕಡಿವಾಣ ಹಾಕಲು ಸರಕಾರವು ಈಗಾಗಲೇ 2017ನೇ ಸಾಲಿನ ಮುಂಗಡಪತ್ರದಲ್ಲಿ ಪಾನ್‌ನೊಂದಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ.

ಹಣ ಚಲುವೆ ತಡೆ (ದಾಖಲೆಗಳ ನಿರ್ವಹಣೆ) ಕಾಯ್ದೆ,2005ಕ್ಕೆ ತಿದ್ದುಪಡಿಯೊಂದಿಗೆ ಹೊರಡಿಸಲಾಗಿರುವ ಅಧಿಸೂಚನೆಯು 50,000 ರೂ.ಮತ್ತು ಹೆಚ್ಚಿನ ಎಲ್ಲ ಹಣಕಾಸು ವಹಿವಾಟುಗಳಿಗೆ ವ್ಯಕ್ತಿಗಳು, ಕಂಪನಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು ಆಧಾರ್ ಜೊತೆ ಪಾನ್ ಉಲ್ಲೇಖಿಸುವುದನ್ನು ಅಥವಾ ನಮೂನೆ 60 ಸಲ್ಲಿಸುವುದನ್ನು ಜೂ.1ರಿಂದ ಕಡ್ಡಾಯಗೊಳಿಸಿದೆ.

ಅಧಿಕೃತ ಕೆವೈಸಿ ದಾಖಲೆಗಳಿಲ್ಲದೆ ತೆರೆಯಬಹುದಾದ ಸಣ್ಣ ಖಾತೆಗಳಿಗೆ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು, ಗರಿಷ್ಠ 50,000 ರೂ.ಠೇವಣಿಯಿಡಲು ಅವಕಾಶವಿರುವ ಈ ಖಾತೆಗಳನ್ನು ಕೋರ್ ಬ್ಯಾಂಕಿಂಗ್ ಇರುವ ಬ್ಯಾಂಕ್ ಶಾಖೆಗಳಲ್ಲಿ ಮಾತ್ರ ತೆರೆಯ ಬಹುದು ಎಂದು ಸ್ಪಷ್ಟಪಡಿಸಿದೆ.

ವ್ಯಕ್ತಿಗತ ನಿಗಾ ಸಾಧ್ಯವಿರುವ ಬ್ಯಾಂಕ್ ಶಾಖೆಗಳಲ್ಲಿಯೂ ಈ ಖಾತೆಗಳನ್ನು ತೆರೆಯಬಹುದಾಗಿದೆ ಮತ್ತು ಇಂತಹ ಖಾತೆಗಳಲ್ಲಿ ಯಾವುದೇ ವಿದೇಶಿ ಹಣ ಜಮೆಯಾಗದಂತೆ ಹಾಗೂ ವಹಿವಾಟುಗಳು ಮತ್ತು ಶಿಲ್ಕಿನ ವಾರ್ಷಿಕ ಸರಾಸರಿಯ ನಿಗದಿತ ಮಿತಿಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಇಂತಹ ಸಣ್ಣ ಖಾತೆಯು ಮೊದಲ 12 ತಿಂಗಳು ಸಕ್ರಿಯವಾಗಿರುತ್ತದೆ ಮತ್ತು ಖಾತೆದಾರನು ಅಧಿಕೃತ ಗುರುತಿನ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿರುವ ರುಜುವಾತನ್ನು ಒದಗಿಸಿದರೆ ಇನ್ನೂ 12 ತಿಂಗಳ ಅವಧಿಗೆ ಖಾತೆಯು ಸಕ್ರಿಯವಾಗಿರುತ್ತದೆ.

ಜೂ.1ರ ನಂತರ ಬ್ಯಾಂಕ ಖಾತೆಯನ್ನು ತೆರೆಯುವ ಸಂದರ್ಭ ವ್ಯಕ್ತಿಯು ಆಧಾರ್ ಹೊಂದಿರದಿದ್ದಲ್ಲಿ ಆತ/ಆಕೆ ಆಧಾರ್‌ಗೆ ಅರ್ಜಿ ಸಲ್ಲಿಸಿರುವ ರುಜುವಾತನ್ನು ಒದಗಿಸ ಬೇಕು ಮತ್ತು ಖಾತೆ ತೆರೆದ ಆರು ತಿಂಗಳುಗಳಲ್ಲಿ ಬ್ಯಾಂಕಿಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು.
ಈ ತಿದ್ದುಪಡಿಯಿಂದಾಗಿ ಆಧಾರ್ ಮತ್ತು ಪಾನ್ ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News