ಬಳ್ಳಾರಿಯ ಹಿಂದೂ ಸಹೋದರರ ಮನೆಯಲ್ಲಿ ಸೌಹಾರ್ದದ ಇಫ್ತಾರ್

Update: 2017-06-16 13:01 GMT

"ಕಳೆದ ವರ್ಷದ ಮಾತಿದು. ರಮಝಾನ್ ಚಂದ್ರದರ್ಶನವಾಗಿತ್ತು. ಈ ತಿಂಗಳಲ್ಲಿ ಏನಾದರೂ ಹೊಸತನದ ಅನುಭವವಾಗಬೇಕು ಎಂದು ನಾನು ಬಯಸಿದ್ದೆ. ಆಗ ನನ್ನ ಪದವಿಯ ಎರಡನೇ ಸೆಮಿಸ್ಟರ್‍ನ ಪರೀಕ್ಷೆ ಮುಗಿದು ಕಾಲೇಜಿಗೆ ಒಂದು ತಿಂಗಳ ರಜೆ ಘೋಷಿಸಲ್ಪಟ್ಟಿತ್ತು. ಹೀಗಿರುವಾಗಲೇ ನಾನು ಬಳ್ಳಾರಿಗೆ ಹೋಗಬೇಕಾಯಿತು. ಜೂನ್ 6ರಂದು ರಾತ್ರಿ 10ಕ್ಕೆ ಪಂಪ್ ವೆಲ್‍ನಿಂದ ಬಸ್ಸೊಂದನ್ನು ಹತ್ತಿದೆ. ನನಗಾಗಿಯೇ ಕಾಯುತ್ತಿದ್ದಂತೆ ಒಂದೇ ಒಂದು ಸೀಟು ಬಾಕಿಯಿತ್ತು".

"ಮುಂಜಾನೆ ಎದ್ದಾಗ ದಾವಣಗೆರೆಯ ಹರಿಹರದಲ್ಲಿದ್ದೆ. ಅಲ್ಲಿಯೇ ಪಕ್ಕದಲ್ಲಿದ್ದ ಮದೀನ ಮಸೀದಿಯಲ್ಲಿ ಸುಬಹಿ ನಮಾಝ್ ನಿರ್ವಹಿಸಿದೆ. ನಂತರ ಸಂಜೆಯವರೆಗೆ ಅಲ್ಲಿಯೇ ಇದ್ದೆ. ಆ ಊರಿನ ಪರಿಚಯ ನನಗಿರಲಿಲ್ಲ. ಅಲ್ಲಿನ ಮನೆಗಳು ಒತ್ತೊತ್ತಾಗಿದ್ದವು. ಅಪರಿಚಿತ ಊರಿನಲ್ಲಿ ನಡೆಯುತ್ತಾ ಕಾಲ ಕಳೆಯುತ್ತಿರಬೇಕಾದರೆ “ಅರೇ ಮಿಸ್ಟರ್, ಒಳಗೆ ಬನ್ನಿ” ಎಂದು ರಸ್ತೆ ಪಕ್ಕದಲ್ಲಿದ್ದ ಮನೆಯೊಡೆಯರೊಬ್ಬರು ಆಹ್ವಾನಿಸಿದರು. ಅವರ ಹೆಸರು ಪ್ರಸನ್ನ ಕುಮಾರ್. ಅವರು ಹರಿಹರದ ಪ್ರಸಿದ್ಧ ವಕೀಲರೂ ಹೌದು. ಮನೆಗೆ ತೆರಳಿದೆ. ಪರಸ್ಪರ ಕುಶಲೋಪರಿಯ ನಂತರ ನನಗೆ ಕುಡಿಯಲು ಹಾಲು ನೀಡಿದರು. ಬೇಡವೆನ್ನುವುದು ಸರಿಕಾಣಲಿಲ್ಲ. ಕುಡಿಯುವುದಕ್ಕೆ ಉಪವಾಸವಿತ್ತು. ಎರಡು ದೋಣಿಗಳ ಮೇಲೆ ಕಾಲಿಟ್ಟಂತಾಯ್ತು. ನನ್ನ ಹಾವಭಾವಗಳಿಂದಲೇ ನನಗೆ ಉಪವಾಸವಿರುವುದನ್ನು ಅವರು ಪತ್ತೆ ಹಚ್ಚಿದರು. “ಪರವಾಗಿಲ್ಲ, ಸೂರ್ಯಾಸ್ತಮಾನವಾದಾಗ ಆಝಾನ್ ಮೊಳಗುತ್ತೆ. ಆಗಲೇ ನಮ್ಮನೇಗೆ ಬಂದ್ಬಿಡು. ಕಾಯ್ತಾ ಇರ್ತೀವಿ” ಎಂದೇ ಹೇಳಿಬಿಟ್ಟರು. ಕ್ಷಣ ಕಾಲ ಪರಿಚಯವಾಗಿದ್ದ ಅವರ ಸೌಹಾರ್ದ ಮನಸ್ಸಿಗೆ ನಾನು ತಲೆದೂಗಿದ್ದೆ".

"ಮರುದಿನ ಬೆಳಗ್ಗೆ ಸರಕಾರಿ ಬಸ್ಸೊಂದನ್ನು ಹತ್ತಿ ಬಳ್ಳಾರಿಯ ಕಾಂತೇಬೆನ್ನೂರು ಎಂಬಲ್ಲಿಗೆ ಕಾಲಿಟ್ಟೆ. ಇಲ್ಲಿರುವ ಹಬ್ಬದ ವಾತಾವರಣ ಅಲ್ಲಿರಲಿಲ್ಲ. ಇಫ್ತಾರ್ ಗೆ ಸಮೋಸಾ, ಫಲಹಾರಗಳಿರಲಿಲ್ಲ. ಕೇವಲ ಪಾರ್ಲೆಜ್ ಬಿಸ್ಕತ್ತೇ ಆಹಾರವಾಗಿತ್ತು. ಕಾಂತೇಬೆನ್ನೂರಿಗೆ ಹೋಗಿ ಅಲ್ಲೊಂದು ಮನೆಯಲ್ಲಿ ನೆಲೆಸಿದ್ದೆ. ನನ್ನ ಮನೆ ಪಕ್ಕದಲ್ಲಿ ಹಿಂದೂಗಳಿದ್ದರು. ಜೈನಧರ್ಮದವರಿದ್ದರು. ಮುಸ್ಲಿಮರ ಮನೆ ಸ್ವಲ್ಪ ದೂರವಿತ್ತು. ಅಲ್ಲೇ ಒಂದೆರಡು ದಿನ ಕಳೆಯಿತು. ರಮಝಾನಿನ 4ನೆ ದಿನ ಶ್ರೀಕಾಂತ್ ಎಂಬ ನನ್ನ ಹೊಸ ಗೆಳೆಯ ಇಫ್ತಾರ್ ವೇಳೆ ಫಲಾಹಾರಗಳೊಂದಿಗೆ ಬಂದ. “ಅಣ್ಣಾ ಇದನ್ನಿಟ್ಟುಕೊಳ್ಳಿ, ಇಫ್ತಾರಿಗಾಯ್ತು” ಎಂದ. ಅವನಿಗೆ ಕೃತಜ್ಞತೆ ಸಲ್ಲಿಸಿದೆ. ಮತ್ತೊಂದು ದಿನ ಶಿಕ್ಷಕರಾದ ಪೂಜಾರ ಸಿದ್ದಪ್ಪ ಎಂಬವರು ಆ ಊರಿನ ಎಲ್ಲಾ ಮುಸ್ಲಿಮರನ್ನು ಅವರ ಮನೆಗೆ ಆಮಂತ್ರಿಸಿ ಇಫ್ತಾರ್ ಪಾರ್ಟಿ ನೀಡಿದ್ದರು".

"ಅಂದಿನ ದಿನ ಇಫ್ತಾರ್ ಅವರ ಮನೆಯಲ್ಲಾಗಿತ್ತು. ಅದಕ್ಕೆ ಪೂಜಾರ ಸಿದ್ದಪ್ಪ ಮಾಸ್ಟರ ದೊಡ್ಡ ಮಗಳೇ ಕಾರಣವಂತೆ. ಅವಳು ಆ ದಿನ ವೃತಾಚರಿಸಿದ್ದಳು. ನಮಾಝನ್ನೂ ನಿರ್ವಹಿಸಿದ್ದಳು. ನಾವು ಒಂದಿಷ್ಟು ಮಂದಿ ಅಲ್ಲಿ ಉಂಡೆವು. ಇಶಾ ನಮಾಝ್ ಗೆ ಸಮಯವಾಯಿತೆಂದು ನಾನು ಹೊರಟಾಗ ಸಿದ್ದಪ್ಪರ ಮಗಳು ಹಾಗೂ ಪತ್ನಿ ಮಸೀದಿವರೆಗೆ ಬಂದು ನಮ್ಮನ್ನು ಬೀಳ್ಕೊಟ್ಟರು. ತರಾವೀಹ್ ಮುಗಿದ ಬಳಿಕ ನಮಗೆ ಆಹಾರವನ್ನೂ ತಂದಿದ್ದರು".

"ಇದೇ ರೀತಿ ಪಾರ್ವತಮ್ಮ ಎಂಬವರು ಕೂಡ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ನಡೆಸಿದ್ದರು. ನಾನೂ ಹಿಂದೂಗಳ ಮನೆಗೆ ಹೋಗುತ್ತಿದ್ದೆ. ಈದ್ ದಿನದಂದು ನಾನೂ ಎಲ್ಲರನ್ನೂ ಕರೆಸಿ ಸಿಹಿ ಹಂಚಿದೆ. ಹಬ್ಬ ಮುಗಿಸಿ ಜುಲೈ 9ರಂದು ತಾಯ್ನಾಡಿಗೆ ಹಿಂದಿರುಗಲು ತಯಾರಾದೆ. ಎಲ್ಲರಲ್ಲೂ ವಿದಾಯ ಹೇಳಿದೆ. ಬಸ್ ನಿಲ್ದಾಣ 15 ಕಿ.ಮೀ. ದೂರದಲ್ಲಿತ್ತು. ಅಲ್ಲಿಯವರೆಗೂ ಆ ಊರಿನ ಗೆಳೆಯರು ನನ್ನೊಂದಿಗೆ ಬಂದರು. ನಮಗೆ ಇಫ್ತಾರ್ ಪಾರ್ಟಿ ಕೊಡಿಸಿದವರಾರೂ ಶ್ರೀಮಂತರಲ್ಲ, ಕಡುಬಡವರೇ. ಆದರೆ ಇದಕ್ಕಿಂತ ಮಿಗಿಲಾದ ಹೃದಯ ಶ್ರೀಮಂತಿಕೆ ಅವರಲ್ಲಿತ್ತು".

Writer - ಎ.ಕೆ.ಫೈಸಲ್ ಕರ್ನೂರು

contributor

Editor - ಎ.ಕೆ.ಫೈಸಲ್ ಕರ್ನೂರು

contributor

Similar News