‘ನ್ಯೂಯಾರ್ಕ್ ಟೈಮ್ಸ್’ ಸಂಪಾದಕೀಯಕ್ಕೆ ಸಿಬಿಐ ಟೀಕೆ

Update: 2017-06-16 13:05 GMT

ನ್ಯೂಯಾರ್ಕ್, ಜೂ. 16: ಎನ್‌ಡಿಟಿವಿ ಸ್ಥಾಪಕ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ಇತ್ತೀಚಿಗೆ ನಡೆದ ಸಿಬಿಐ ದಾಳಿಗಳನ್ನು ಖಂಡಿಸಿ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ಪ್ರಕಟಿಸಿದ ಸಂಪಾದಕೀಯವನ್ನು ಸಿಬಿಐ ತಳ್ಳಿಹಾಕಿದೆ.

ಎನ್‌ಡಿಟಿವಿ ಮೇಲಿನ ಸಿಬಿಐ ದಾಳಿಗಳು, ಪ್ರಧಾನಿ ನರೇಂದ್ರ ಮೋದಿಯ ಆಳ್ವಿಕೆಯಲ್ಲಿ ಭಾರತೀಯ ಸುದ್ದಿ ಮಾಧ್ಯಮವನ್ನು ಬೆದರಿಸುವ ಹೊಸ ಮಾದರಿಯ ಅಪಾಯಕಾರಿ ತಂತ್ರಗಳಾಗಿವೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ ಬರೆದಿತ್ತು.

ಪತ್ರಿಕೆಯ ಸಂಪಾದಕೀಯವು ‘ಏಕಮುಖವಾಗಿದೆ’ ಹಾಗೂ ಎನ್‌ಡಿಟಿವಿಯ ಪೋಷಕ ಕಂಪೆನಿ ಆರ್‌ಆರ್‌ಪಿಆರ್ ವಿರುದ್ಧ ಭಾರತದ ವಿವಿಧ ತೆರಿಗೆ ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳು 2011ರಿಮದ ನಡೆಸುತ್ತಾ ಬಂದಿರುವ ತನಿಖಾ ಇತಿಹಾಸವನ್ನು ಅದು ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಿಬಿಐ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಸಿಬಿಐಯ ಪ್ರತಿಕ್ರಿಯೆಯನ್ನು ಅಮೆರಿಕದ ಪತ್ರಿಕೆಯು ತನ್ನ ಗುರುವಾರದ ಸಂಚಿಕೆಯಲ್ಲಿ ಪ್ರಕಟಿಸಿದೆ.

ಸಿಬಿಐ ವಕ್ತಾರ ಆರ್.ಕೆ. ಗೌರ್ ‘ನ್ಯೂಯಾಕ್ ಟೈಮ್ಸ್’ ಬಗ್ಗೆ ಖಾರವಾದ ಟೀಕೆಯನ್ನೇ ವ್ಯಕ್ತಪಡಿಸಿದ್ದಾರೆ.

‘‘ಪತ್ರಿಕಾ ಸ್ವಾತಂತ್ರದ ಬಗ್ಗೆ ಭಾರತಕ್ಕೆ ‘ನ್ಯೂಯಾರ್ಕ್ ಟೈಮ್ಸ್’ನಿಂದ ಯಾವುದೇ ಪಾಠ ಬೇಕಿಲ್ಲ. ನಮ್ಮ ಸಂಸ್ಥೆಗಳು ಮತ್ತು ಸಂಪ್ರದಾಯಗಳು ಶ್ರೀಮಂತ ಹಾಗೂ ವೈವಿಧ್ಯ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಜಾಸತ್ತಾತ್ಮಕ ವೌಲ್ಯಗಳಿಂದ ಪೋಷಿಸಲ್ಪಟ್ಟಿವೆ’’ ಎಂದು ಅವರು ಬರೆದಿದ್ದಾರೆ.

ಸಿಬಿಐ ಆರೋಪ ತಳ್ಳಿ ಹಾಕಿದ ರಾಯ್

ಐಸಿಐಸಿಐ ಬ್ಯಾಂಕ್‌ನಿಂದ 2008ರಲ್ಲಿ ತೆಗೆದುಕೊಂಡ ಸಾಲವನ್ನು ತಾನು ಮರುಪಾವತಿಸಿಲ್ಲ ಎಂಬ ಸಿಬಿಐ ಆರೋಪವನ್ನು ಪ್ರಣಯ್ ರಾಯ್ ತಿರಸ್ಕರಿಸಿದ್ದಾರೆ.

ಮೋದಿ ಆಡಳಿತದ ಬಗ್ಗೆ ಎನ್‌ಡಿಟಿವಿ ಮಾಡುವ ಟೀಕಾತ್ಮಕ ವರದಿಯ ಹಿನ್ನೆಲೆಯಲ್ಲಿ ಜೂನ್ 5ರಂದು ಪ್ರಣಯ್ ರಾಯ್ ನಿವಾಸದ ಮೇಲೆ ದಾಳಿ ನಡೆಸಲಾಯಿತು ಎಂಬುದಾಗಿ ಹಲವರು ಬಣ್ಣಿಸಿದ್ದಾರೆ.

ಅದೇ ವೇಳೆ, ಎನ್‌ಡಿಎ ಮೈತ್ರಿಕೂಟದೊಂದಿಗೆ ಸ್ನೇಹದಿಂದ ಇರುವ ಸಂಸ್ಥೆಗಳಿಗೆ ಹೇಗೆ ನಿಯಮಿತವಾಗಿ ಶಿಕ್ಷೆಯ ಭಯವಿಲ್ಲದೆ ಸಾಲ ಮರುಪಾವತಿಸದಿರಲು ಅವಕಾಶ ನೀಡಲಾಗುತ್ತದೆ ಎಂಬುದರ ಬಗ್ಗೆ ಹಲವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News