ವಿಶ್ವಸಂಸ್ಥೆ ಘಟಕಕ್ಕೆ ಭಾರತ ಪುನರಾಯ್ಕೆ ಪಾಕಿಸ್ತಾನಕ್ಕೆ ಸೋಲು
ವಿಶ್ವಸಂಸ್ಥೆ, ಜೂ. 16: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ಎಕಸಾಕ್)ಗೆ ಇನ್ನೊಂದು ಮೂರು ವರ್ಷಗಳ ಅವಧಿಗೆ ಭಾರತ ಪುನರಾಯ್ಕೆಯಾಗಿದೆ.
ಮಂಡಳಿಗೆ ಆಯ್ಕೆಯಾದ 18 ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಪಾಕಿಸ್ತಾನ ಹೊರಗುಳಿದಿದೆ.
ಏಶ್ಯ ಪೆಸಿಫಿಕ್ ವಿಭಾಗದಲ್ಲಿ ಭಾರತ 183 ಮತಗಳನ್ನು ಗಳಿಸಿದೆ. ಮತ ಗಳಿಕೆಯಲ್ಲಿ ಜಪಾನ್ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಎರಡನೆ ಸ್ಥಾನದಲ್ಲಿದೆ.
ಎಕಸಾಕ್‌ನಲ್ಲಿದ್ದ 18 ಖಾಲಿ ಸ್ಥಾನಗಳನ್ನು ತುಂಬಿಸಲು ಗುರುವಾರ ಚುನಾವಣೆ ನಡೆಯಿತು.
ಭಾರತದ ಪ್ರಸಕ್ತ ಅವಧಿ ಈ ವರ್ಷ ಮುಗಿಯುತ್ತದೆ.
ಪಾಕಿಸ್ತಾನದ ಪ್ರಸಕ್ತ ಅವಧಿಯೂ ಈ ವರ್ಷ ಮುಗಿಯಲಿದ್ದು, ಚುನಾವಣೆಯಲ್ಲಿ ಅದೂ ಸ್ಪರ್ಧಿಸಿತ್ತು. ಆದರೆ, ಅದಕ್ಕೆ ಕೇವಲ ಒಂದು ಮತ ಸಿಕ್ಕಿದ್ದು, ಪರಾಭವಗೊಂಡಿದೆ.
ಗುರುವಾರ ನಡೆದ ಚುನಾವಣೆಯಲ್ಲಿ ಬೆಲಾರುಸ್, ಇಕ್ವೆಡಾರ್, ಎಲ್ ಸಾಲ್ವಡರ್, ಫ್ರಾನ್ಸ್, ಜರ್ಮನಿ, ಘಾನಾ, ಭಾರತ, ಐರ್‌ಲ್ಯಾಂಡ್, ಜಪಾನ್, ಮಾಲವಿ, ಮೆಕ್ಸಿಕೊ, ಮೊರೊಕ್ಕೊ, ಫಿಲಿಪ್ಪೀನ್ಸ್, ಸ್ಪೇನ್, ಸುಡಾನ್, ಟೋಗೊ, ಟರ್ಕಿ ಮತ್ತು ಉರುಗ್ವೆ ದೇಶಗಳು ಆಯ್ಕೆಯಾದವು.