ಸ್ವಯಂಚಾಲಿತ ಖಾತೆ ಮಾಹಿತಿ ವಿನಿಮಯಕ್ಕೆ ಸ್ವಿಸ್ ಅಸ್ತು
ಬರ್ನ್ (ಸ್ವಿಟ್ಸರ್‌ಲ್ಯಾಂಡ್), ಜೂ. 16: ಭಾರತ ಮತ್ತು ಇತರ 40 ದೇಶಗಳೊಂದಿಗೆ ಹಣಕಾಸು ಖಾತೆ ಮಾಹಿತಿಯನ್ನು ಸ್ವಯಂಚಾಲಿತವಾಗಿ ವಿನಿಮಯಗೊಳಿಸುವ ಒಪ್ಪಂದಕ್ಕೆ ಸ್ವಿಟ್ಸರ್‌ಲ್ಯಾಂಡ್ ಶುಕ್ರವಾರ ಅನುಮೋದನೆ ನೀಡಿತು. ಇದು ಶಂಕಿತ ಕಪ್ಪುಹಣದ ಕುರಿತ ವಿವರಗಳ ವಿನಿಮಯಕ್ಕೆ ಅವಕಾಶ ನೀಡುತ್ತದೆ ಎಂದು ನಂಬಲಾಗಿದೆ.
ಅದೇ ವೇಳೆ, ರಹಸ್ಯ ಮತ್ತು ಮಾಹಿತಿ ಭದ್ರತೆಗೆ ಅತಿ ಹೆಚ್ಚಿನ ಒತ್ತು ಕೊಡುವಂತೆ ಅದು ಕೋರಿದೆ.
ಈ ಒಪ್ಪಂದವನ್ನು 2018ರಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಹಾಗೂ ಮೊದಲ ಗುಂಪಿನ ಮಾಹಿತಿ ವಿನಿಮಯವು 2019ರಲ್ಲಿ ನಡೆಯುತ್ತದೆ ಎಂದು ಸ್ವಿಸ್ ಫೆಡರಲ್ ಕೌನ್ಸಿಲ್ ಹೇಳಿದೆ. ಸ್ವಿಸ್ ಫೆಡರಲ್ ಕೌನ್ಸಿಲ್ ಸ್ವಿಟ್ಸರ್‌ಲ್ಯಾಂಡ್‌ನ ಅತ್ಯುನ್ನತ ಆಡಳಿತ ಸಂಸ್ಥೆಯಾಗಿದೆ.
ಸ್ವಯಂಚಾಲಿತ ವಿನಿಮಯ ಆರಂಭಗೊಳ್ಳುವ ನಿರ್ದಿಷ್ಟ ದಿನಾಂಕವನ್ನು ಭಾರತ ಸರಕಾರಕ್ಕೆ ಕೌನ್ಸಿಲ್ ಶೀಘ್ರದಲ್ಲೇ ತಿಳಿಸಲಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಕೌನ್ಸಿಲ್ ಅಂಗೀಕರಿಸಿದ ಕರಡು ಅಧಿಸೂಚನೆಯ ಪ್ರಕಾರ, ಈ ನಿರ್ಧಾರವು ಮುಂದಿನ ಯಾವುದೇ ಜನಮತಗಣನೆಯ ಫಲಿತಾಂಶಕ್ಕೆ ಒಳಪಡುವುದಿಲ್ಲ. ಹಾಗಾಗಿ, ಅದರ ಜಾರಿಯಲ್ಲಿ ಇನ್ನು ಮುಂದೆ ವಿಧಿವಿಧಾನಾತ್ಮಕ ವಿಳಂಬವಿರುವುದಿಲ್ಲ.
ಕಪ್ಪುಹಣವು ಭಾರತದಲ್ಲಿ ಭಾರೀ ಚರ್ಚೆಗೊಳಪಡುತ್ತಿರುವ ವಿಷಯವಾಗಿದೆ. ತಮ್ಮ ಅಕ್ರಮ ಸಂಪತ್ತನ್ನು ಹೊರದೇಶಗಳಲ್ಲಿ ಶೇಖರಿಸಿಡಲು ಬಯಸುವ ಭಾರತೀಯರಿಗೆ ಸ್ವಿಟ್ಸರ್‌ಲ್ಯಾಂಡ್ ಅತ್ಯಂತ ಸುರಕ್ಷಿತ ದೇಶವಾಗಿದೆ ಎಂದು ಭಾವಿಸಲಾಗಿದೆ.
ತೆರಿಗೆ ಸಂಬಂಧಿ ತನಿಖೆಗಳಿಗಾಗಿ ಹಣಕಾಸು ಮಾಹಿತಿಯ ಸ್ವಯಂಚಾಲಿತ ವಿನಿಮಯ ಪದ್ಧತಿಯನ್ನು ಜಾರಿಗೆ ತರುವ ವಿಷಯದಲ್ಲಿ ಭಾರತ ಮತ್ತು ಸ್ವಿಟ್ಸರ್‌ಲ್ಯಾಂಡ್ ನಡುವೆ ಭಾರೀ ಪ್ರಮಾಣದಲ್ಲಿ ಮಾತುಕತೆ ನಡೆದಿದೆ. ಅದರ ಫಲವಾಗಿಯೇ ಇಂದಿನ ನಿರ್ಧಾರವನ್ನು ಸ್ವಿಸ್ ಫೆಡರಲ್ ಕೌನ್ಸಿಲ್ ತೆಗೆದುಕೊಂಡಿದೆ.