ರೈತರ ಪ್ರತಿಭಟನೆ ಸಂದರ್ಭ ಅಪ್ರಾಪ್ತ ಅಮಾಯಕರ ಬಂಧನ: ಆರೋಪ

Update: 2017-06-16 15:23 GMT

  ಭೋಪಾಲ್, ಜೂ.16: ಮಂದ್‌ಸೋರ್ ಜಿಲ್ಲೆಯಲ್ಲಿ ಇತ್ತೀಚೆಗೆ ಪೊಲೀಸರ ಗೋಲೀಬಾರ್‌ಗೆ ರೈತರು ಬಲಿಯಾದ ಘಟನೆಯನ್ನು ವಿರೋಧಿಸುತ್ತಿದ್ದ ಪ್ರತಿಭಟನಾಕಾರರನ್ನು ಹತೋಟಿಗೆ ತರುವ ಪ್ರಯತ್ನವಾಗಿ ಪೊಲೀಸರು ಅಕ್ರಮವಾಗಿ ಕೆಲವು ಅಪ್ರಾಪ್ತರನ್ನು ಥಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜೂನ್ 9ರಂದು ಭೋಪಾಲ್ ಸಮೀಪದ ಫಂಡಾ ಎಂಬಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಈ ಅಪ್ರಾಪ್ತರು ತಮ್ಮ ಮನೆಯಲ್ಲಿದ್ದುಕೊಂಡು ಘಟನೆಯನ್ನು ವೀಕ್ಷಿಸುತ್ತಿದ್ದರು. ಆದರೂ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ .

    ನವಿ ಪಥಾರಿಯ(17 ವರ್ಷ) ಎಂಬಾತನ ತಂದೆ ಕ್ಯಾನ್ಸರ್ ರೋಗಿಯಾದ ಕಾರಣ ಕಾಲೇಜೊಂದರಲ್ಲಿ ಬಿಎಸ್ಸಿ ಪದವಿಗೆ ಪ್ರವೇಶ ಪಡೆಯುವ ಬಗ್ಗೆ ಸಲಹೆ ಸೂಚನೆ ನೀಡುವಂತೆ ತನ್ನ ಸ್ನೇಹಿತ ರವೀಶ್ ಮೇವಾಡ(17 ವರ್ಷ) ಎಂಬಾತನನ್ನು ಮನೆಗೆ ಕರೆಸಿಕೊಂಡಿದ್ದ. ಇಬ್ಬರೂ ಮನೆಯಲ್ಲಿ ಕುಳಿತಿದ್ದಾಗ ಹೊರಗಡೆ ಭಾರೀ ಗದ್ದಲ ಕೇಳಿ ಬಂದಿದೆ. ಕೂಡಲೇ ಹೊರಬಂದು ನೋಡಿದಾಗ ಜನರು ಮತ್ತು ಪೊಲೀಸರು ದಿಕ್ಕುಪಾಲಾಗಿ ಓಡುತ್ತಿದ್ದರು. ಏನೋ ದುರ್ಘಟನೆ ನಡೆಯುತ್ತಿದೆ ಎಂದು ಅರಿತ ಇಬ್ಬರೂ ತಕ್ಷಣ ಮನೆಯೊಳಗೆ ಓಡಿದ್ದಾರೆ. ಆದರೆ ಇವರನ್ನು ಗಮನಿಸಿದ ಪೊಲೀಸರು ಮನೆಯತ್ತ ಬಂದು ಬಾಗಿಲು ಬಡಿದಿದ್ದಾರೆ. ನೀವು ನಿರಪರಾಧಿಗಳಾದರೆ ಹೊರಬನ್ನಿ ಎಂದು ಪೊಲೀಸರು ಹೇಳಿದ ಮಾತಿಗೆ ಇವರಿಬ್ಬರು ಮನೆಯಿಂದ ಹೊರಗೆ ಬಂದಿದ್ದಾರೆ. ತಕ್ಷಣ ಇವರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ. ತಾವಿನ್ನೂ 17 ವರ್ಷದವರು. ಘಟನೆಯ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಗೋಗರೆದರೂ ತಮ್ಮನ್ನು ಬಂಧಿಸಿದ್ದಾರೆ ಎಂದು ಗುರುವಾರ ಜಾಮೀನು ಪಡೆದು ಹೊರ ಬಂದಿರುವ ನವಿ ಮತ್ತು ರವೀಶ್ ಹೇಳಿದ್ದಾರೆ.

  ತನ್ನ ತಂದೆ ಕ್ಯಾನ್ಸರ್ ರೋಗಿಯಾದ ಕಾರಣ ಅವರನ್ನು ಒಬ್ಬರನ್ನೇ ಮನೆಯಲ್ಲಿ ಬಿಟ್ಟು ತಾನು ಹೋಗುವಂತಿಲ್ಲ. ಅಲ್ಲದೆ ತಾನು ನಿರಪರಾಧಿ ಎಂದು ಹೇಳಿಕೊಂಡರೂ ಪೊಲೀಸರು ಕೇಳಲಿಲ್ಲ.ಕ್ಯಾನ್ಸರ್ ರೋಗಿಯಾದ ನನ್ನ ತಂದೆ ಗುಲಾಬ್ ಸಿಂಗ್ ಪೊಲೀಸ್ ಸಿಬ್ಬಂದಿಯೋರ್ವರ ಕಾಲಿಗೆ ಬಿದ್ದು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ.ತಂದೆಯೆದುರೇ ತನ್ನನ್ನು ಥಳಿಸಲಾಯಿತು. ಇದರಿಂದ ನಾನು ನೆಮ್ಮದಿ ಕಳೆದುಕೊಂಡಿದ್ದು ನನ್ನ ಭವಿಷ್ಯದ ಬಗ್ಗೆ ಚಿಂತೆ ಮೂಡಿದೆ ಎಂದು ನವಿ ಹೇಳಿದ್ದಾನೆ.

80ರ ವೃದ್ಧೆಯನ್ನೂ ಥಳಿಸಿದರು: ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನದಲ್ಲಿ ಪೊಲೀಸರು 80 ವರ್ಷದ ವೃದ್ಧೆಯ ಮೇಲೂ ಕೈಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಆಶ್ರಯ ನೀಡಿದ್ದಾರೆ ಎಂಬ ಕಾರಣ ನೀಡಿ ವೃದ್ದೆ ಕಮಲಾ ಬಾಯಿ ಮೆವಾಡ ಎಂಬವರನ್ನು ಎಳೆದಾಡಿ ಆಕೆಯನ್ನು ಥಳಿಸಿದ್ದಾರೆ. ಇದರಿಂದ ಈಕೆಯ ಕೈಯ ಮೂಳೆ ಮುರಿದಿದೆ.

     ಈಕೆಯ ರಕ್ಷಣೆಗೆ ಮುಂದಾದ ಓರ್ವ ಪುತ್ರ ಮತ್ತು ನಾಲ್ವರು ಮೊಮ್ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ ಅವರು ದಿಕ್ಕಾಪಾಲಾಗಿ ಓಡಿದರು. ನಾನಾಗ ಮನೆಯ ಹೊರಗೆ ಕುಳಿತಿದ್ದೆ. ಕೆಲವರು ತನ್ನ ಮನೆಯೆಡೆಗೆ ಓಡಿ ಬಂದರು. ಅವರನ್ನು ಬೆಂಬತ್ತಿ ಬಂದ ಪೊಲೀಸರು ಮನೆಯೊಳಗೆ ಪ್ರವೇಶಿಸಿ ತನ್ನನ್ನು ಮತ್ತು ಕುಟುಂಬದವರನ್ನು ಥಳಿಸಿದ್ದಾರೆ ಎಂದು ಕಮಲಾ ಬಾಯಿ ದೂರಿದ್ದಾರೆ.

ಆದರೆ ಈ ಆರೋಪವನ್ನು ನಿರಾಕರಿಸಿರುವ ಭೋಪಾಲ್ (ಉತ್ತರ) ಪೊಲೀಸ್ ಅಧೀಕ್ಷಕ ಅರವಿಂದ್ ಸಕ್ಸೇನ, ಕಮಲಾ ಬಾಯಿ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈಗ ಸುಳ್ಳು ಹೇಳುತ್ತಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ.

           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News