"ನನ್ನ ಗೋರಿಯಲ್ಲಿ ಮೊದಲ ರಾತ್ರಿ ಹೇಗಿರಬಹುದು"?: ಆಪ್ತರನ್ನು ಕಾಡುತ್ತಿರುವ ಫಿರೋಝ್ ಅಹ್ಮದ್ ರ ಫೇಸ್‌ಬುಕ್ ಪೋಸ್ಟ್
ಅವಂತಿಪುರ, ಜೂ.17: ಶಂಕಿತ ಲಷ್ಕರ್ ಎ ತಯ್ಬಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸಬ್ ಇನ್ಸ್‌ಪೆಕ್ಟರ್ ಫಿರೋಝ್ ಅಹ್ಮದ್ ದಾರ್ ಅವರ ಕೆಲ ವರ್ಷಗಳ ಹಿಂದೆ ಫೇಸ್ಬುಕ್ ನಲ್ಲಿ ಬರೆದಿದ್ದ "ನೀವು ನಿಮ್ಮ ಗೋರಿಯ ಕತ್ತಲೆ ಕೂಪದಲ್ಲಿ ಒಬ್ಬಂಟಿಯಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ" ಎಂಬ ಪೋಸ್ಟ್ ಫಿರೋಝ್ ರ ಆಪ್ತರನ್ನು ತೀವ್ರವಾಗಿ ಕಾಡುತ್ತಿದೆ.
32ರ ಹರೆಯದ ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿ ಫಿರೋಝ್ ಅಹ್ಮದ್ ದಾರ್ ರ ಮೃತದೇಹವನ್ನು ಪುಲ್ವಾಮ ಜಿಲ್ಲೆಯ ದೋಗ್ರಿಪುರ ಗ್ರಾಮದಲ್ಲಿರುವ ದಫನ ಮಾಡಲಾಯಿತು. ಈ ಸಂದರ್ಭ ಸಾವಿರಾರು ಆಪ್ತರು, ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಅನಂತ್‌ನಾಗ್‌ನ ಅಚಬಾಲ್ ಪ್ರದೇಶದಲ್ಲಿ ಶಂಕಿತ ಲಷ್ಕರ್ ಎ ತಯ್ಬಾ ಭಯೋತ್ಪಾದಕರು ಶುಕ್ರವಾರ ಪೊಲೀಸರ ಮೇಲೆ ನಡೆಸಿದ ದಾಳಿಯಲ್ಲಿ ದಾರ್ ಹಾಗೂ ಇತರ 5 ಮಂದಿ ಮೃತಪಟ್ಟಿದ್ದರು.
"ನನ್ನ ಗೋರಿಯಲ್ಲಿ ನನ್ನ ಮೊದಲ ರಾತ್ರಿ ಹೇಗಿರಬಹುದು. ನಿಮ್ಮ ಮೃತದೇಹವನ್ನು ಸ್ನಾನ ಮಾಡಿಸುವುದು ಹಾಗೂ ಗೋರಿಯಲ್ಲಿ ಇರಿಸುವುದಕ್ಕೆ ಸಿದ್ಧತೆ ನಡೆಸುವ ಕ್ಷಣದ ಬಗ್ಗೆ ನೆನಪಿಸಿಕೊಳ್ಳಿ ? ಜನರು ನಿಮ್ಮ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ಯುವ ದಿನ ಹಾಗೂ ಅಂದು ನಿಮ್ಮ ಕುಟುಂಬದ ಆಕ್ರಂದನವನ್ನು ನೆನಪಿಸಿಕೊಳ್ಳಿ. ನಿಮ್ಮನ್ನು ಗೋರಿಯೊಳಗೆ ಇರಿಸುವ ಕ್ಷಣ ನೆನಪಿಸಿಕೊಳ್ಳಿ ಎಂದು ಫಿರೋಝ್ ಅಹ್ಮದ್ ದಾರ್ ತನ್ನ ಫೇಸ್‌ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದರು.
ತನ್ನ ಗೆಳೆಯರಿಂದ "ದಬಾಂಗ್" ಹಾಗೂ "ಒನ್ ಮ್ಯಾನ್ ಆರ್ಮಿ" ಎಂದು ಕರೆಸಿಕೊಳ್ಳುತ್ತಿದ್ದ ದಾರ್ ಕಾಶ್ಮೀರದ ಪರಿಸ್ಥಿತಿ ಸುಧಾರಣೆಯಾಗಲು ಆಶಿಸಿದ್ದರು. ಅವರ ಅಂತಿಮ ಯಾತ್ರೆಗೆ ಸಿದ್ಧತೆ ನಡೆಯುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ವಾಕ್ಯಗಳು ಹಾಗೂ ಅವರ ಸೇವಾನಿಷ್ಠೆಯ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.