ತೆಂಡೂಲ್ಕರ್ ಅತ್ತೆ ಅನ್ನಾಬೆಲ್ ಮೆಹ್ತಾಗೆ ಎಂಬಿಇ ಪುರಸ್ಕಾರ
ಮುಂಬೈ, ಜೂ.17: ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅತ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ , ಬ್ರಿಟನ್ ಪ್ರಜೆಯಾಗಿರುವ ಅನ್ನಾಬೆಲ್ ಮೆಹ್ತಾರನ್ನು ಎಂಬಿಇ(ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪಾಯರ್) ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮುಂಬೈಯಲ್ಲಿರುವ ಅವಕಾಶವಂಚಿತ ಸಮುದಾಯದವರಿಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಅನ್ನಾಬೆಲ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದ್ದು ರಾಣಿಯಿಂದ ಅನುಮೋದನೆ ದೊರೆತಿದೆ ಎಂದು ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಪ್ರಕಟಣೆ ತಿಳಿಸಿದೆ.
ಅಪ್ನಾಲಯ ಎಂಬ ಎನ್‌ಜಿಒ ಸಂಸ್ಥೆಯ ಮೂಲಕ ಕಳೆದ 25 ವರ್ಷಗಳಿಂದ ಅನ್ನಾಬೆಲ್ ಅವಕಾಶವಂಚಿತರ ಕ್ಷೇಮಾಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಸುಮಾರು 6 ಲಕ್ಷ ಜನರಿರುವ ಶಿವಾಜಿನಗರ ಕೊಳೆಗೇರಿ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಇವರು , ಸಮಗ್ರ ಸಮುದಾಯ ಅಭಿವೃದ್ಧಿ ಯೋಜನೆಯ ಮೂಲಕ ಸ್ವಯಂಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪುರಸ್ಕಾರವನ್ನು ಈ ವಷಾಂತ್ಯ ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.