ಲಂಡನ್ ಅಗ್ನಿ ದುರಂತ; ನಾಪತ್ತೆಯಾಗಿರುವ 58 ಮಂದಿ ಮೃತರೆಂದು ಪರಿಗಣನೆ: ಪೊಲೀಸ್
ಲಂಡನ್, ಜೂ. 18: ಲಂಡನ್‌ನ ಗ್ರೆನ್‌ಫೆಲ್ ಟವರ್ ಅಗ್ನಿ ದುರಂತದ ಬಳಿಕ ನಾಪತ್ತೆಯಾಗಿರುವ 58 ಮಂದಿಯನ್ನು ಮೃತಪಟ್ಟಿದ್ದಾರೆ ಎಂಬುದಾಗಿ ಈಗ ಪರಿಗಣಿಸಲಾಗಿದೆ ಎಂದು ಬ್ರಿಟಿಶ್ ಪೊಲೀಸರು ಹೇಳಿದರು.
‘‘ದುರಂತ ನಡೆದ ರಾತ್ರಿಯಂದು ಗ್ರೆನ್‌ಫೆಲ್ ಟವರ್‌ನಲ್ಲಿ ಇದ್ದರೆನ್ನಲಾದ 58 ಮಂದಿ ಈಗ ನಾಪತ್ತೆಯಾಗಿದ್ದಾರೆ. ಹಾಗಾಗಿ, ಅವರು ಮೃತಪಟ್ಟಿದ್ದಾರೆ ಎಂಬುದಾಗಿ ನಾವೀಗ ಭಾವಿಸಬೇಕಾಗಿದೆ’’ ಎಂದು ಕಮಾಂಡರ್ ಸ್ಟುವರ್ಟ್ ಕಂಡಿ ಸುದ್ದಿಗಾರರಿಗೆ ತಿಳಿಸಿದರು.
ಈ ಸಂಖ್ಯೆ ಬದಲಾಗಬಹುದೆನ್ನುವ ಸೂಚನೆಯನ್ನೂ ಅವರು ನೀಡಿದರು.
ಸುರಕ್ಷತಾ ಬೆದರಿಕೆಯ ಹಿನ್ನೆಲೆಯಲ್ಲಿ ಶವಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು ಎಂದು ಹೇಳಿದ ಅವರು, ಈಗ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದರು. ರಕ್ಷಣಾ ಕಾರ್ಯಕರ್ತರು 24 ಮಹಡಿ ಕಟ್ಟಡದ ತುದಿ ಭಾಗವನ್ನು ತಲುಪಿದ್ದಾರೆ ಎಂದರು.
ದುರಂತದ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂಬ ಭರವಸೆಯನ್ನು ಕಂಡಿ ನೀಡಿದರು.
ಪ್ರಧಾನಿ ವಿರುದ್ಧ ಸಂತ್ರಸ್ತರ ಪ್ರತಿಭಟನೆ
ಪಶ್ಚಿಮ ಲಂಡನ್‌ನ ಗ್ರೆನ್‌ಫೆಲ್ ಟವರ್‌ನಲ್ಲಿ ಕರಕಲಾದ ಎಲ್ಲರ ದೇಹಗಳನ್ನು ಗುರುತಿಸಲು ಸಾಧ್ಯವಾಗದು ಎಂಬ ಭೀತಿಯನ್ನು ಸ್ಟುವರ್ಟ್ ಕಂಡಿ ವ್ಯಕ್ತಪಡಿಸಿದ್ದಾರೆ.
ಬೆಂಕಿ ದುರಂತದ ಹಿನ್ನೆಲೆಯಲ್ಲಿ ಜನರ ಕೋಪವನ್ನು ತಣಿಸಲು ಪ್ರಧಾನಿ ತೆರೇಸಾ ಮೇ ಸರಕಾರ ಈ ಮೊದಲು ಉದ್ದೇಶಿಸಿತ್ತು. ಅವರು ನಿವಾಸಿಗಳನ್ನು ಶುಕ್ರವಾರ ಭೇಟಿಯಾಗುವ ಕಾರ್ಯಕ್ರಮವಿತ್ತು. ಆದರೆ, ನಿವಾಸಿಗಳನ್ನು ಭೇಟಿಯಾಗಲು ಅವರು ಬಂದಾಗ, ‘ನಿಮಗೆ ನಾಚಿಕೆಯಾಗಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಾ ನೂರಾರು ಪ್ರತಿಭಟನಕಾರರು ಸ್ಥಳೀಯ ಟೌನ್‌ಹಾಲ್‌ಗೆ ನುಗ್ಗಿದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಮೇ ಅವರನ್ನು ಸ್ಥಳದಿಂದ ಹೊರಗೆ ಕರೆದುಕೊಂಡು ಹೋದರು.