ಚಂದ್ರಶೇಖರ್ ಆಝಾದ್ ಬಿಡುಗಡೆಗೆ ಆಗ್ರಹಿಸಿ ದಲಿತರ ಬೃಹತ್ ರ‍್ಯಾಲಿ

Update: 2017-06-18 17:33 GMT

ಹೊಸದಿಲ್ಲಿ,ಜೂ.18: ಉತ್ತರಪ್ರದೇಶದಲ್ಲಿ ದಲಿತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಹಾಗೂ ತಮ್ಮ ನಾಯಕ ಚಂದ್ರಶೇಖರ್ ಆಝಾದ್‌ರ ಬಿಡುಗಡೆಗೆ ಆಗ್ರಹಿಸಿ ಭೀಮ್ ಆರ್ಮಿಯ ಕಾರ್ಯಕರ್ತರು ರವಿವಾರ ರಾಜಧಾನಿ ದಿಲ್ಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದರು.

 2500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಈ ರ‍್ಯಾಲಿಯಲ್ಲಿ ಚಂದ್ರಶೇಖರ್‌ರ ತಾಯಿ ಕಮಲೇಶ್ ದೇವಿ ಹಾಗೂ ಬಿಎಸ್ಪಿ ಪಕ್ಷದ ಸ್ಥಾಪಕ ದಿವಂಗತ ಕಾನ್ಸಿರಾಮ್‌ರ ಸಹೋದರ ಸ್ವರ್ಣ್ ಕೌರ್ ಮತ್ತಿತ್ತರು ಉಪಸ್ಥಿತರಿದ್ದರು.

  ಸಂಸತ್‌ಭವನ ರಸ್ತೆಯಿಂದ ಹಿಡಿದು ಹೊಸದಿಲ್ಲಿ ಮನ್ಸಿಪಲ್ ಮಂಡಳಿ ಸಭಾಭವನದವರೆಗಿನ ರಸ್ತೆಯವರೆಗೆ ನೀಲಿ ಬಣ್ಣದ ಸಮವಸ್ತ್ರ ಧರಿಸಿದ್ದ ಭೀಮ್‌ಸೇನಾ ಕಾರ್ಯಕರ್ತರ ಪ್ರವಾಹವೇ ಹರಿದುಬಂದಿತ್ತು. ಉ.ಪ್ರ., ರಾಜಸ್ಥಾನ, ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳಿಂದ ಆಗಮಿಸಿದ್ದ ದಲಿತ ಪ್ರತಿಭಟನಕಾರರು ಜೈಭೀಮ್ ಘೋಷಣೆಗಳನ್ನು ಕೂಗುತ್ತಿದ್ದರು.

  ರ‍್ಯಾಲಿ ಯಲ್ಲಿ ಭಾಷಣ ಮಾಡಿದ ಭೀಮ್‌ಆರ್ಮಿಯ ಎಲ್ಲಾ ಮುಖಂಡರು ಸಂಘಟನೆಯು ರಾಜಕೀಯದಿಂದ ದೂರವಿದ್ದುಕೊಂಡೇ, ದಲಿತ ಚಳವಳಿಯನ್ನು ಮುನ್ನಡೆಸುವಂತೆ ಕರೆ ನೀಡಿದರು.

ಬಿಎಸ್ಪಿ ಸ್ಥಾಪಕ ಕಾನ್ಶಿರಾಮ್ ಅವರ ಸಹೋದರಿ ಸ್ವರ್ಣ ಕೌರ್ ಮಾತನಾಡಿ, ‘‘ ನನ್ನ ಸಹೋದರನ ಶ್ರಮದ ಬಲದಿಂದಲೇ ಬಿಎಸ್ಪಿ ಅಧಿನಾಯಕಿ ಮಾಯಾವತಿ ತನ್ನ ಇಡೀ ರಾಜಕೀಯ ಬದುಕನ್ನು ರೂಪಿಸಿಕೊಂಡರು. ಭೀಮ್ ಆರ್ಮಿಯು ಯುವಕರೇ ಮುಂಚೂಣಿಯಲ್ಲಿರುವ ಸಂಘಟನೆಯಾಗಿದೆ. ಅನ್ಯಾಯವಾದಾಗಲೆಲ್ಲಾ ಯುವಜನರ ಸಿಡಿದೇಳಲಿದ್ದಾರೆ’’ ಎಂದರು.

  ಭೀಮ್ ಆರ್ಮಿಯ ಸ್ಥಾಪಕರಾದ ಚಂದ್ರಶೇಖರ್ ವಕೀಲರಾಗಿದ್ದು, ಸಹರಣ್‌ಪುರ್ ನಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಘರ್ಷಣೆಯಲ್ಲಿ ಪಾತ್ರವಹಿಸಿದ್ದರೆಂಬ ಆರೋಪದಲ್ಲಿ ಅವರನ್ನು ಉತ್ತರಪ್ರದೇಶ ಪೊಲೀಸರು ಜೂನ್ 8ರಂದು ಹಿಮಾಚಲ ಪ್ರದೇಶದ ಡಾಲ್‌ಹೌಸಿ ಎಂಬಲ್ಲಿ ಬಂಧಿಸಿದ್ದರು.

ರ‍್ಯಾಲಿಯಲ್ಲಿ ಅವರ ಸಹೋದರರಾದ ಭಗತ್‌ಸಿಂಗ್ ಹಾಗೂ ಕಮಲ್ ಕಿಶೋರ್ ಕೂಡಾ ಉಪಸ್ಥಿತರಿದ್ದರು. ಮೇ 9ರಂದು ರಾಮ್‌ನಗರದಲ್ಲಿ ಹಾಜಿಗಠಿೂ ಮೇ 5ರಂದು ಸಹರಣ್‌ಪುರದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸಹರಣ್‌ಪುರ್‌ನಲ್ಲಿ ಭೀಮ್ ಆರ್ಮಿಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

  ‘‘ನನ್ನ ಪುತ್ರ ಬಿಡುಗಡೆಗೊಳ್ಳುವ ತನಕ ನಾನು ಪ್ರತಿಭಟನೆ ಹಾಗೂ ಧರಣಿ ನಡೆಸಲಿದ್ದೇನೆ ಮತ್ತು ಅನಿರ್ದಿಷ್ಟಾವಧಿ ನಿರಶನ ಕೂಡಾ ಕೈಗೊಳ್ಳುವೆ.ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರಿದ ಬಳಿಕ ಹಿಂಸಾಚಾರ ಉಲ್ಬಣಿಸಿದ್ದು, ಉತ್ತರಪ್ರದೇಶ ಸರಕಾರಲ್ಲಾಗಲಿ ಅಥವಾ ನರೇಂದ್ರ ಮೋದಿ ಸರಕಾರದಿಂದ ಯಾವುದೇ ನ್ಯಾಯ ದೊರೆಯಬಹುದೆಂಬ ನಿರೀಕ್ಷೆ ನನಗಿಲ್ಲ’’.

ಕಮಲೇಶ್ ದೇವಿ

ಭೀಮ್ ಆರ್ಮಿ ಸ್ಥಾಪಕ ಚಂದ್ರಶೇಖರ್ ಆಝಾದ್‌ರ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News