ರಾಷ್ಟ್ರಪತಿ ಚುನಾವಣೆ: ಅಮಿತ್ ಶಾ ಪ್ರಸ್ತಾಪ ನಿರಾಕರಿಸಿದ ಉದ್ಧವ್ ಠಾಕ್ರೆ

Update: 2017-06-18 15:56 GMT

ಮುಂಬೈ, ಜೂ.18: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿಗೆ ಪೂರ್ಣ ಅಧಿಕಾರ ನೀಡುವ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರ ಪ್ರಸ್ತಾಪವನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮಿತ್ರ ಪಕ್ಷಗಳು ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ರವಿವಾರ ಮುಂಬೈಯಲ್ಲಿ ಭೇಟಿಯಾದರು.

ರಾಷ್ಟ್ರಪತಿ ಅಭ್ಯರ್ಥಿಯನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಂಪೂರ್ಣ ಅಧಿಕಾರ ನೀಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಠಾಕ್ರೆ ಹೇಳಿರುವುದಾಗಿ ಶಿವಸೇನೆ ಮೂಲಗಳು ತಿಳಿಸಿವೆ. ಉದ್ಧವ್ ಠಾಕ್ರೆಯ ನಿವಾಸದಲ್ಲಿ 4 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹಾಗೂ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಪಾಲ್ಗೊಂಡಿದ್ದರು. ಅಮಿತ್ ಶಾ ಅವರೊಂದಿಗೆ ರಾಜ್ಯ ಬಿಜೆಪಿಯ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಇದ್ದರು.

ಶಿವಸೇನೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿಯ ತಾತ್ವಿಕ ಸಲಹೆಗಾರ ಹಾಗೂ ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರನ್ನು ಸೂಚಿಸಿತ್ತು. ಆದರೆ, ಬಿಜೆಪಿ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಅನಂತರ 91 ವರ್ಷದ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್‌ನ ಹೆಸರು ಸೂಚಿಸಿತ್ತು. ಆದರೆ ಅದಕ್ಕೂ ಬಿಜೆಪಿ ಸ್ಪಂದಿಸಿರಲಿಲ್ಲ. ಶುಕ್ರವಾರದಿಂದ ಸರಕಾರ ಹಾಗೂ ವಿವಿಧ ವಿಪಕ್ಷಗಳ ನಾಯಕರ ನಡುವೆ ಸರಣಿ ಸಭೆ ನಡೆಯುತ್ತಿದೆ. ರಾಜ್‌ನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಸರಕಾರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ನಾಯಕರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಸೇರಿದಂತೆ ಹಲವರನ್ನು ಸಂಪರ್ಕಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News