ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ
ಲಂಡನ್, ಜೂ.18: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಇಂದು ಸತತ ಎರಡನೆ ಬಾರಿ ಪ್ರಶಸ್ತಿ ಗೆಲ್ಲುವ ಭಾರತದ ಕನಸು ನುಚ್ಚುನೂರಾಗಿದೆ. ಪಾಕಿಸ್ತಾನ 180 ರನ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದೆ.
ಗೆಲುವಿಗೆ 339 ರನ್‌ಗಳ ಕಠಿಣ ಸವಾಲು ಪಡೆದ ಭಾರತ 30.3 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಹೀನಾಯ ಸೋಲು ಅನುಭವಿಸಿದೆ. ಮುಹಮ್ಮದ್ ಆಮಿರ್ (16ಕ್ಕೆ 3), ಹಸನ್ ಅಲಿ(19ಕ್ಕೆ 3), ಶದಾಬ್ ಖಾನ್(60ಕ್ಕೆ 2) ಮತ್ತು ಜುನೈದ್ ಖಾನ್(20ಕ್ಕೆ 1) ದಾಳಿಗೆ ಸಿಲುಕಿದ ಭಾರತ ಬೇಗನೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಭಾರತದ ಪರ ಹಾರ್ದಿಕ್ ಪಾಂಡ್ಯ ಗರಿಷ್ಠ ರನ್ ಗಳಿಸಿದರು. ಅವರು 43 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಲ್ಲಿ 76 ರನ್ ಗಳಿಸಿದರು. ಅವರನ್ನು ಹೊರತುಪಡಿಸಿದರೆ ಶಿಖರ್ ಧವನ್(21), ಯುವರಾಜ್ ಸಿಂಗ್(22), ರವೀಂದ್ರ ಜಡೇಜ(15) ಎರಡಂಕೆಯ ಸ್ಕೋರ್ ದಾಖಲಿಸಿದರು. ರೋಹಿತ್ ಶರ್ಮ(0), ವಿರಾಟ್ ಕೊಹ್ಲಿ(5) ಮತ್ತು ಮಹೇಂದ್ರ ಸಿಂಗ್ ಧೋನಿ(4) ಕಳಪೆ ಪ್ರದರ್ಶನ ನೀಡಿದರು.
ಪಾಕಿಸ್ತಾನ 338/4: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಆರಂಭಿಕ ದಾಂಡಿಗ ಫಾಖರ್ ಝಮಾನ್ ಅವರ ಶತಕ (114), ಅಝರ್ ಅಲಿ (59)ಮತ್ತು ಮುಹಮ್ಮದ್ ಹಫೀಝ್ (ಔಟಾಗದೆ 57) ಅರ್ಧಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 338 ರನ್ ಗಳಿಸಿತ್ತು.