ಫೇಸ್‌ಬುಕ್ ಪೋಸ್ಟ್‌ಗೆ ಆದಿವಾಸಿಗಳ ಪ್ರತಿಭಟನೆ: ಅಸ್ಸಾಂನಲ್ಲಿ ಸಿಎಂ ಯೋಗಿಯ ಪ್ರತಿಕೃತಿ ದಹನ

Update: 2017-06-18 18:00 GMT

ಗುವಾಹಟಿ,ಜೂ.18: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರಿನ ಫೇಸ್‌ಬುಕ್ ಪುಟದಲ್ಲಿ ವಿವಸ್ತ್ರಗೊಳಿಸಲ್ಪಟ್ಟ ಸ್ಥಿತಿಯಲ್ಲಿರುವ ತಮ್ಮ ಸಮುದಾಯದ ಮಹಿಳೆಯ ಛಾಯಾಚಿತ್ರಗಳನ್ನು ಪ್ರಕಟಿಸಿರುವುದನ್ನು ಖಂಡಿಸಿ ಅಸ್ಸಾಂನ ಆದಿವಾಸಿ ಪಂಗಡವರು ರವಿವಾರ ರಾಜ್ಯದ ವಿವಿಧೆಡೆ ಆದಿತ್ಯನಾಥ್ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆ.

   ಈ ಫೇಸ್‌ಬುಕ್ ಪುಟದಲ್ಲಿ ಹಲವರು ಮಂದಿ ಮಹಿಳೆಯೊಬ್ಬಳನ್ನು ಬೆನ್ನಟ್ಟಿ, ಆಕೆಯನ್ನು ನಗ್ನಗೊಳಿಸಿ ಥಳಿಸುತ್ತಿರುವ ಛಾಯಾಚಿತ್ರಗಳನ್ನು ಪ್ರಕಟಿಸಲಾಗಿತ್ತು. ಛಾಯಾಚಿತ್ರಗಳ ಪಕ್ಕದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳೆಂದು ಹಿಂದಿಯಲ್ಲಿ ಬರೆಯಲಾಗಿತ್ತು.

 ಆದರೆ ಆ ಛಾಯಾಚಿತ್ರಗಳು 2007ರಲ್ಲಿ ಚಹಾ ತೋಟದ ಕಾರ್ಮಿಕರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳೀಯರಿಂದ ದಾಳಿಗೊಳಗಾದ ಆದಿವಾಸಿ ಮಹಿಳೆಯದ್ದೆಂದು ಆದಿವಾಸಿ ಪಂಗಡಗಳು ಹೇಳಿವೆ.

 ಮಹಿಳೆಯ ಮುಖವನ್ನು ಮರೆಮಾಚದೆ ಫೋಟೋಗಳನ್ನು ಪ್ರಕಟಿಸಿರುವುದು ಹಾಗೂ ಕೋಮುದ್ವೇಷವನ್ನು ಹರಡಲು ನಡೆದಿರುವ ಪ್ರಯತ್ನದಿಂದ ಆಕ್ರೋಶಗೊಂಡ ಆದಿವಾಸಿ ಸಂಘಟನೆಗಳು ಆದಿತ್ಯನಾಥ್ ಹಾಗೂ ಈ ಪೋಸ್ಟ್‌ನ್ನು ತನ್ನ ಫೇಸ್‌ಬುಕ್ ಪುಟದ ಜೊತೆ ಹಂಚಿಕೊಂಡಿರುವ ತೇಜ್‌ಪುರ ಸಂಸದ ಆರ್.ಪಿ.ಶರ್ಮಾ ಅವರ ಪ್ರತಿಕೃತಿಗಳನ್ನು ದಹಿಸಿದ್ದಾರೆಂದು ವರದಿಗಳು ತಿಳಿಸಿವೆ.

ವಿವಾದಿತ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿ ಅಸ್ಸಾಂನ ಅಖಿಲ ಆದಿವಾಸಿ ವಿದ್ಯಾರ್ಥಿ ಸಂಘಟನೆಯ ಕೇಂದ್ರೀಯ ಸಮಿತಿ ಸದಸ್ಯ ದೆಬೆನ್ ಒರಾಂಗ್, ಚಾರ್ದೆಯೊ ಜಿಲ್ಲೆಯ ಮೊರನ್‌ಹಾತ್ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News