ಅಮೆರಿಕ: ಮಸೀದಿಯಿಂದ ಹೊರಬಂದ ಬಾಲಕಿಯನ್ನು ಅಪಹರಿಸಿ ಹತ್ಯೆ

Update: 2017-06-19 13:33 GMT

ವಾಶಿಂಗ್ಟನ್, ಜೂ. 19: ವರ್ಜೀನಿಯದ ಮಸೀದಿಯೊಂದರಿಂದ ಹೊರಬಂದ 17 ವರ್ಷದ ಅಮೆರಿಕನ್ ಮುಸ್ಲಿಮ್ ಹುಡುಗಿಯೊಬ್ಬಳನ್ನು ರವಿವಾರ ವ್ಯಕ್ತಿಯೊಬ್ಬ ಥಳಿಸಿ ಅಪಹರಿಸಿದ ಘಟನೆ ನಡೆದಿದೆ.

ಬಳಿಕ ಆ ಹುಡುಗಿಯ ಶವ ಕೆರೆಯೊಂದರಲ್ಲಿ ಪತ್ತೆಯಾಗಿದೆ.ಆಕೆಯನ್ನು ಕೊಲೆಗೈದ ಸಂಶಯದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಈ ಭಯಾನಕ ದಾಳಿಯು ಮುಸ್ಲಿಮ್ ಸಮುದಾಯದಲ್ಲಿ ಭಾರೀ ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.ವಾಶಿಂಗ್ಟನ್‌ನಿಂದ ಸುಮಾರು 30 ಮೈಲಿ ದೂರದಲ್ಲಿರುವ ‘ಆಲ್ ಡಲ್ಸ್ ಏರಿಯ ಮುಸ್ಲಿಮ್ ಸೊಸೈಟಿ’ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಜನರು ಭಾರೀ ಸಂಖ್ಯೆಯಲ್ಲಿ ಸೇರಿದರು.

ರವಿವಾರ ಮುಂಜಾನೆ ಈ ದಾಳಿ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ಗೆಳತಿಯರು ಮಸೀದಿಯ ಹೊರಗೆ ಬಂದಾಗ, ಸ್ಟರ್ಲಿಂಗ್ ಎಂಬಲ್ಲಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದರು ಎಂದು ಫೇರ್‌ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.ಆಗ ಕಾರಿನಿಂದ ಇಳಿದ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದನು.ಆಗ ಅವರೆಲ್ಲ ಚೆಲ್ಲಾಪಿಲ್ಲಿಯಾದರು. ಸ್ನೇಹಿತೆಯರು ಒಟ್ಟುಗೂಡಿದಾಗ ಸಂತ್ರಸ್ತ ಬಾಲಕಿ ನಾಪತ್ತೆಯಾಗಿರುವುದು ಗಮನಕ್ಕೆ ಬಂತು.

ಫೇರ್‌ಫಾಕ್ಸ್ ಮತ್ತು ಲೂಡನ್ ಕೌಂಟಿಗಳ ಅಧಿಕಾರಿಗಳು ಆಕೆಗಾಗಿ ಗಂಟೆಗಟ್ಟಳೆ ಶೋಧ ನಡೆಸಿದರು.ಸುಮಾರು ಅಪರಾಹ್ನ 3 ಗಂಟೆಗೆ ಆಕೆಯ ಮೃತದೇಹ ಸ್ಟರ್ಲಿಂಗ್‌ನ ಕೆರೆಯೊಂದರಲ್ಲಿ ಪತ್ತೆಯಾಯಿತು.

ಶೋಧ ಕಾರ್ಯದ ವೇಳೆ ಆ ಸ್ಥಳದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಕಾರೊಂದನ್ನು ತಡೆದ ಪೊಲೀಸರು, ಕಾರಿನ ಚಾಲಕ 22 ವರ್ಷದ ಡಾರ್ವಿನ್ ಮಾರ್ಟಿನೇಝ್ ಟೊರೆಸ್ ಎಂಬಾತನನ್ನು ಬಂಧಿಸಿದ್ದಾರೆ.
ಇದು ದ್ವೇಷಪೂರಿತ ದಾಳಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೊಲೀಸರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News