×
Ad

ಮಕ್ಕಳ ಶೋಷಣೆ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಿಲ್ಲ: ಉಮಾಶ್ರೀ ವಿಷಾದ

Update: 2017-06-19 20:57 IST

ಬೆಂಗಳೂರು, ಜೂ.19: ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸಾಕಷ್ಟು ಕಾಯ್ದೆ ಹಾಗೂ ಕಾನೂನುಗಳಿದ್ದರೂ ಮಾದಕ ದ್ರವ್ಯ ಮಾಫಿಯಾದಲ್ಲಿ ಸಿಲುಕಿರುವ ಮಕ್ಕಳನ್ನು ರಕ್ಷಿಸಲು, ಮಕ್ಕಳ ಕಳ್ಳಸಾಗಣೆ, ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ವಿಷಾದಿಸಿದ್ದಾರೆ.

ಸೋಮವಾರ ವಿಧಾನಪರಿಷತ್‌ನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ಬಡತನವು ಮಕ್ಕಳನ್ನು ಮಾದಕ ದ್ರವ್ಯ ಮಾರಾಟ ಮಾಫಿಯಾದಲ್ಲಿ ಸಿಲುಕುವಂತೆ ಮಾಡುತ್ತಿದೆ. ಬಾಲ್ಯ ವ್ಯವಸ್ಥೆಯಲ್ಲಿಯೇ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊರುವ ಮಕ್ಕಳು ಹಣದ ಆಸೆಗಾಗಿ ಮಾದಕ ದ್ರವ್ಯಗಳ ಮಾರಾಟದಲ್ಲಿ ತೊಡಗುತ್ತಿದ್ದಾರೆ. ಇಂತಹ ಕೂಪದಲ್ಲಿ ಸಿಲುಕಿದ್ದ ಹಲವು ಬಾಲಕರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳ ಕಳ್ಳ ಸಾಗಾಣಿಕೆ: ರಾಜ್ಯದಲ್ಲೂ ಮಕ್ಕಳ ಕಳ್ಳ ಸಾಗಾಣಿಕೆ ಮಿತಿಮೀರಿದೆ. ಇತ್ತೀಚೆಗೆ ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ. ಹಾಗೂ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಆರೋಪಿಗಳಿಗೆ ಕಠಿಣ ಶಿಕ್ಷಣವನ್ನು ನೀಡಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಸನ್ಮಾನವನ್ನು ಮಾಡಲಾಯಿತು. ಹೀಗಾಗಿ ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಯಲು ಸರಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.


ಮಕ್ಕಳ ಹಬ್ಬ: ಅನಾಥ ಮಕ್ಕಳನ್ನು ಪೋಷಿಸುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ಬಾಲ ಮಂದಿರವನ್ನು ನಡೆಸಲಾಗುತ್ತಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಿರಿಯ ಸಾಹಿತಿಗಳಿಂದ ಕತೆ, ಕವನ ಬರೆಯುವಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಕಬನ್ ಪಾರ್ಕ್‌ನಲ್ಲಿ ಮಕ್ಕಳ ಹಬ್ಬವನ್ನು ಮಾಡಿ, ಅಲ್ಲಿ ಮಕ್ಕಳು ಬರೆದಿರುವ ಕವನ ಹಾಗೂ ಕಥಾ ಸಂಕಲನಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಿಕ್ಷಾಟನೆ: ರಾಜ್ಯದಲ್ಲಿ ಮಕ್ಕಳ ಭಿಕ್ಷಾಟನೆ ದೊಡ್ಡ ಪಿಡುಗಾಗಿದೆ. ಬೆಂಗಳೂರಿನ ಪ್ರತಿ ಸಿಗ್ನಲ್‌ಗಳಲ್ಲಿಯೂ ಮಕ್ಕಳು ತಟ್ಟೆ ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ. ಇವರನ್ನು ರಕ್ಷಿಸಿ ಪುನರ್ ವಸತಿ ಕೇಂದ್ರಗಳಿಗೆ ತಲುಪಿಸಿದರೆ ಕೂಡಲೆ ಅವರ ತಂದೆ-ತಾಯಿಗಳು ಬಂದು ಕರೆದುಕೊಂಡು ಹೋಗುತ್ತಾರೆ. ಕೆಲವು ವೇಳೆ ನಕಲಿ ತಂದೆ-ತಾಯಿಗಳು ಬಂದು ಮಕ್ಕಳನ್ನು ಕೇಳುವ ಪ್ರಸಂಗಗಳು ನಡೆದಿವೆ ಎಂದು ಅವರು ತಿಳಿಸಿದರು.


ದತ್ತು ಸ್ವೀಕಾರ: ದತ್ತು ಸ್ವೀಕಾರದಲ್ಲಿರುವ ನಿಯಮಗಳು ತುಂಬ ಕಠಿಣವಾಗಿದ್ದು, ಇದನ್ನು ಸರಳೀಕರಿಸಬೇಕೆಂದು ಸದಸ್ಯೆ ಮೋಟಮ್ಮ ಮನವಿ ಮಾಡಿದ್ದಾರೆ. ಆದರೆ, ಅದು ಕೇಂದ್ರ ಸರಕಾರದ ಅಧೀನದಲ್ಲಿದೆ. ಹಾಗೂ ದತ್ತು ಸ್ವೀಕಾರವು ಕಠಿಣವಾಗಿರುವುದರಿಂದ ಸಮಸ್ಯೆಗಳಿಗಿಂತ ಉಪಯೋಗವೇ ಹೆಚ್ಚಿದೆ. ಕಾನೂನು ಬಾಹಿರವಾಗಿ ದತ್ತು ಸ್ವೀಕಾರ ಮಾಡಿದರೆ ಹಾಗೂ ಪ್ರೋತ್ಸಾಹ ಮಾಡುವವರಿಗೆ ಕನಿಷ್ಠ 5ವರ್ಷಗಳ ಕಠಿಣ ಶಿಕ್ಷೆಯಿದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News