ವಿದೇಶ ಪ್ರವಾಸ: ಜು.1ರಿಂದ ನಿರ್ಗಮನ ಪತ್ರದ ಅವಶ್ಯಕತೆ ಇಲ್ಲ

Update: 2017-06-19 17:38 GMT

ಹೊಸದಿಲ್ಲಿ, ಜೂ. 19: ವಿದೇಶಕ್ಕೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಮುಂದಿನ ತಿಂಗಳಿನಿಂದ ನಿರ್ಗಮನ ಪತ್ರ ಭರ್ತಿ ಮಾಡುವ ಅವಶ್ಯಕತೆ ಇಲ್ಲ. ಆದರೂ, ರೈಲು ಮಾರ್ಗ, ಸಮುದ್ರ ಬಂದರು ಹಾಗೂ ಭೂಮಾರ್ಗವಾಗಿ ಚೆಕ್‌ಪೋಸ್ಟ್‌ಗಳನ್ನು ದಾಟುವವರು ಗಡಿ ದಾಟುವ ಪತ್ರವನ್ನು ಭರ್ತಿ ಮಾಡಬೇಕಿದೆ.

 ಜು. 1ರಿಂದ ಭಾರತೀಯರು ನಿರ್ಗಮನ ಪತ್ರವನ್ನು ಭರ್ತಿ ಮಾಡುವ ಪದ್ಧತಿಯನ್ನು ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ. ಭಾರತೀಯರು ಸರಾಗವಾಗಿ ವಿದೇಶ ಪ್ರಯಾಣ ಬೆಳೆಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಸದ್ಯ ವಿದೇಶಗಳಿಗೆ ಪ್ರಯಾಣ ಬೆಳೆಸುವ ಭಾರತೀಯರು ತಮ್ಮ ಹೆಸರು, ಜನ್ಮ ದಿನಾಂಕ, ಪಾಸ್‌ಪೋರ್ಟ್ ಸಂಖ್ಯೆ, ಭಾರತದಲ್ಲಿನ ವಿಳಾಸ, ವಿಮಾನ ಸಂಖ್ಯೆ ಹಾಗೂ ಪ್ರಯಾಣದ ದಿನಾಂಕವನ್ನು ನಿರ್ಗಮನ ಪತ್ರದಲ್ಲಿ ಭರ್ತಿ ಮಾಡಬೇಕಾಗಿದೆ.

ಪ್ರಯಾಣಿಕರ ಇದೇ ವಿವರಗಳು ಇತರ ಮೂಲಗಳಿಂದ ಲಭ್ಯವಿರುತ್ತದೆ ಎಂದು ನಿರ್ಗಮನ ಪತ್ರ ಭರ್ತಿ ಮಾಡುವ ಪದ್ಧತಿಯನ್ನು ರದ್ದುಗೊಳಿಸಿರುವುದರ ಹಿಂದಿನ ಕಾರಣವನ್ನು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಈ ನಿರ್ಧಾರದಿಂದ ಹಲವಾರು ವಿದೇಶಿ ಪ್ರಯಾಣಿಗರ ವಲಸೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವ ವೇಳೆ ತಗ್ಗಲಿದ್ದು, ವಿಮಾನ ನಿಲ್ದಾಣ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೊಡ್ಡ ಮಟ್ಟದ ಪ್ರಯಾಣಿಕರಿಗೆ ಸಹಕರಿಸಲು ಅನುಕೂಲವಾಗುತ್ತದೆ. ಭಾರತಕ್ಕೆ ಆಗಮಿಸುವ ಸಂದರ್ಭದಲ್ಲಿ ಆಗಮನ ಪತ್ರವನ್ನು ಭರ್ತಿ ಮಾಡುವ ಪದ್ಧತಿಯನ್ನು ಈ ಹಿಂದೆಯೇ ಕೈಬಿಡಲಾಗಿದೆ.

ಅಂತಾರಾಷ್ಟ್ರೀಯ ಹಾಗೂ ನಾಗರಿಕ ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಳೆದ ವರ್ಷ ಕೇಂದ್ರ ಸುಂಕದ ಅಧಿಕಾರಿಗಳು ಒಂದು ವೇಳೆ ಭಾರತೀಯರು ಸುಂಕ ರಹಿತ ವಸ್ತುಗಳನ್ನು ವಿದೇಶದಿಂದ ತಂದಾಗ, ಅದನ್ನು ಘೋಷಿಸಿಕೊಳ್ಳುವ ಪದ್ಧತಿಯನ್ನು ಕೈಬಿಟ್ಟಿದ್ದರು.

ನಿರ್ಬಂಧಿತ ಹಾಗೂ ಸುಂಕಸಹಿತ ವಸುತಿಗಳನ್ನು ಹೊಂದಿರುವವರು ಮಾತ್ರ ಭಾರತೀಯ ಸುಂಕ ಘೋಷಣಾ ಪತ್ರವನ್ನು ಭರ್ತಿ ಮಾಡಬೇಕಿದೆ. ಈ ಮುನ್ನ ಈ ಪದ್ಧತಿ ದೇಶವನ್ನು ಪ್ರವೇಶಿಸುವ ಎಲ್ಲರಿಗೂ ಅನ್ವಯವಾಗುತ್ತಿತ್ತು.

  ಇದರ ಬೆನ್ನಿಗೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯವರು ದೇಶದಲ್ಲಿರುವ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸ್ವದೇಶಿ ಪ್ರಯಾಣಿಕರ ಕೈ ಸರಕುಗಳಿಗೆ ಮುದ್ರೆ ಹಾಕುವ ಪದ್ಧತಿಯನ್ನು ಕೈಬಿಟ್ಟಿತ್ತು . ಈ ಪದ್ಧತಿ ದಿಲ್ಲಿ, ಮುಂಬೈ, ಕೊಚ್ಚಿ, ಬೆಂಗಳೂರು, ಹೈದರಾಬಾದ್, ಕೋಲ್ಕತಾ ಮತ್ತು ಅಹಮದಾಬಾದ್ ಸೇರಿದಂತೆ ದೇಶದ ಕೆಲವು ವಾಣಿಜ್ಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News