ರಮಾನಾಥ ರೈ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ, ಆರೆಸ್ಸೆಸ್‌ಗೆ ಇಲ್ಲ: ಹೇಮನಾಥ ಶೆಟ್ಟಿ

Update: 2017-06-20 08:11 GMT

ಪುತ್ತೂರು, ಜೂ.20: ಜಿಲ್ಲೆಯಲ್ಲಿ ಕೋಮುವಾದ ನಡೆಸಿ ಅಧಿಕಾರ ಗಿಟ್ಟಿಸಿಕೊಂಡಿರುವ ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರಿಗೆ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ಅಧಿಕಾರ ಪಡೆದುಕೊಂಡಿರುವ ಸಚಿವ ಬಿ. ರಮಾನಾಥ ರೈ ವಿರುದ್ಧ ಹೇಳಿಕೆ ನೀಡುವ ನೈತಿಕತೆಯಿಲ್ಲ. ಸಚಿವರ ಹೇಳಿಕೆಯು ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅವಶ್ಯಕವಾಗಿದ್ದು, ಇದಕ್ಕೆ ಶಾಂತಿಯನ್ನು ಬಯಸುವ ಎಲ್ಲಾ ಜನರ ಪೂರ್ಣ ಬೆಂಬಲವಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೇಳಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಲಡ್ಕದಲ್ಲಿ ನಡೆದ ಘಟನೆಯು ಜಿಲ್ಲೆಯ ಶಾಂತಿಯನ್ನು ಕದಡಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಮತ್ತು ಸಂಘ ಪರಿವಾರ ನಡೆಸಿದ ಷಡ್ಯಂತ್ರವಾಗಿದೆ. ಈ ವಿಚಾರದಲ್ಲಿ ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡು ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಕೋಮು ಪ್ರಚೋದನೆ ನೀಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿರುವುದು ಸಮರ್ಪಕವಾಗಿದೆ. ಬಿಜೆಪಿಯ ಮುಖಂಡರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿ ಅಧಿಕಾರ ಪಡೆದಿಲ್ಲ ಬದಲಿಗೆ ಕೋಮುವಾದ ಬೆಳೆಸಿ ನಾಯಕರಾಗಿದ್ದಾರೆ. ಇವರಿಗೆ ಸಚಿವ ರಮಾನಾಥ ರೈ ಅವರನ್ನು ವಜಾಗೊಳಿಸುವಂತೆ ಆಗ್ರಹಿಸುವ ನೈತಿಕತೆಯಿಲ್ಲ ಎಂದರು.

ಕೊಣಾಜೆಯಲ್ಲಿ ಕಾರ್ತಿಕ್‌ರಾಜ್ ಎಂಬ ಯುವಕ ಕೊಲೆಯಾದಾಗ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂಬ ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್, ಸುಳ್ಯದಲ್ಲಿ ಕೋಮು ಗಲಭೆಯ ವೇಳೆ ಡಿ.ವಿ ಸದಾನಂದ ಗೌಡ ಎಂದಿಗೂ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಜಿಲ್ಲೆಯಲ್ಲಿ ನಡೆದಿರುವ ಹಲವಾರು ಹತ್ಯೆಗಳಿಗೆ ಕಾಂಗ್ರೆಸ್ ಕಾರಣವಲ್ಲ. ಬಿಜೆಪಿ ಮತ್ತು ಸಂಘಪರಿವಾರವೇ ಕಾರಣವಾಗಿದೆ. ಬಂಟ್ವಾಳದ ಹರೀಶ್ ಪೂಜಾರಿ, ಕಾರ್ತಿಕ್‌ರಾಜ್, ವಿನಾಯಕ ಬಾಳಿಗ, ಜಲೀಲ್ ಕರೋಪಾಡಿ ಹತ್ಯೆ ಪ್ರಕರಣ ಇವೆಲ್ಲದರಲ್ಲೂ ಸಂಘಪರಿವಾರದ ಕೈವಾಡವಿದೆ ಎಂದು ಆರೋಪಿಸಿದರು.

ಸಚಿವ ರಮಾನಾಥ ರೈಯವರ ಒಳ್ಳೆಯತನವನ್ನು ಬಿಜೆಪಿ ಮತ್ತು ಸಂಘಪರಿವಾರ ದುರುಪಯೋಗಪಡಿಸಿಕೊಂಡಿದೆ. ಕಲ್ಲಡ್ಕದಲ್ಲಿ ಒಂದು ಸಂದರ್ಭದಲ್ಲಿ ತನ್ನ ಮೇಲೆಯೇ ಕಲ್ಲೆಸೆತ ನಡೆದಾಗಲೂ ಅವರು ಈ ಬಗ್ಗೆ ಅವರು ಯಾವುದೇ ದೂರು ನೀಡದೆ, ಕಾನೂನು ಕ್ರಮ ಕೈಗೊಂಡಿರಲಿಲ್ಲ. ಅಂದು ದುಷ್ಟಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಲ್ಲಿ ಅವರು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಉಸ್ತುವಾರಿ ಸಚಿವರಿಗೆ ಸಂಘ ಪರಿವಾರ ಅಥವಾ ಬಿಜೆಪಿಗರ ಅನುಮತಿ ಬೇಕಾಗಿಲ್ಲ. ಇವರು ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಕಾಂಗ್ರೆಸ್‌ನವರು ಬೆದರಿ ಪಲಾಯನ ಮಾಡುವುದಿಲ್ಲ. ಇವರಿಗೆ ಜಿಲ್ಲೆಯ ಜನರ ಬಗ್ಗೆ ನೈಜ ಕಾಳಜಿಯಿದ್ದಲ್ಲಿ ಕೋಮು ದ್ವೇಷದ ಮೂಲಕ ರಾಜಕೀಯ ಲಾಭ ಪಡೆಯುವ ದುರುದ್ದೇಶ ಬಿಟ್ಟು ಜಿಲ್ಲೆಯಲ್ಲಿ ಸಾಮರಸ್ಯಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಪರಿಶ್ರಮವನ್ನು ಬೆಂಬಲಿಸಲಿ ಎಂದರು.

 ಕಲ್ಲಡ್ಕ ಹೆಸರು ಬದಲಾಗಬೇಕಾಗಿದೆ:

ಕಲ್ಲಡ್ಕ ಎಂದರೆ ಕಲ್ಲು ಎಸೆಯುವುದು ಎಂದು ಪ್ರಚಲಿತವಾಗಿದ್ದು, ಈ ಹೆಸರೇ ಯ ತರುತ್ತಿದೆ. ಕಲ್ಲು ಬಿಸಾಡುವುದೇ ಇಲ್ಲಿ ಎಲ್ಲಾ ಗಲಭೆಗೆ ಕಾರಣವಾಗಿದೆ, ಕಲ್ಲಡ್ಕದ ಬಗ್ಗೆ ಜನರ ಭಯ ದೂರವಾಗಲು ಮತ್ತು ಇಲ್ಲಿನ ಪ್ರಚೋದನಾತ್ಮಕ ಚಿಂತನೆ ಬದಲಾಗಲು ಈ ಊರಿಗಿರುವ ‘ಕಲ್ಲಡ್ಕ’ ಎಂಬ ಹೆಸರನ್ನು ಬದಲಾಯಿಸುವುದೇ ಸೂಕ್ತ ಎಂದು ಹೇಮನಾಥ್ ಶೆಟ್ಟಿ ಅಭಿಪ್ರಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಯು. ಲೋಕೇಶ್ ಹೆಗ್ಡೆ, ಲ್ಯಾನ್ಸಿ ಮಸ್ಕರೇನಸ್, ಮುಖೇಶ್ ಕೆಮ್ಮಿಂಜೆ, ಅಮರನಾಥ ಗೌಡ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News