ಆಸ್ಟ್ರೇಲಿಯದಲ್ಲಿ ಭಾರತೀಯ ಉದ್ಯೋಗಿಯ ವಂಚನೆ: ಮಾಲೀಕರಿಗೆ 88 ಲಕ್ಷ ರೂ. ದಂಡ

Update: 2017-06-20 13:18 GMT

ಮೆಲ್ಬರ್ನ್, ಜೂ. 20: ಆಸ್ಟ್ರೇಲಿಯದಲ್ಲಿನ ತಮ್ಮ ಕಾಫಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಉದ್ಯೋಗಿಯೋರ್ವನನ್ನು ಶೋಷಣೆಗೈದ ಪ್ರಕರಣದಲ್ಲಿ ಅದರ ಭಾರತ ಮೂಲದ ಮಾಲೀಕರಿಗೆ ಸುಮಾರು 1.8 ಲಕ್ಷ ಡಾಲರ್ (ಸುಮಾರು 88 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ.

ಪಡೆದ ಸಂಬಳವನ್ನು ಹಿಂದಕ್ಕೆ ಕೊಡಬೇಕು, ಇಲ್ಲದಿದ್ದರೆ ವೀಸಾ ರದ್ದುಗೊಳಿಸಲಾಗುವುದು ಎಂಬುದಾಗಿ ಬೆದರಿಸಿ ಮಾಲೀಕರು ತಮ್ಮ ಉದ್ಯೋಗಿಯಿಂದ ಹಣ ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಮೈಕಲ್ ಜಾರೆಟ್, ಸಂದೀಪ್ ಚೋಖನಿಗೆ 30,000 ಡಾಲರ್ (14.71 ಲಕ್ಷ ರೂಪಾಯಿ) ಹಾಗೂ ಆತ ಮತ್ತು ಆತನ ಪತ್ನಿಯ ಒಡೆತನದ ಕಂಪೆನಿಗೆ 1.5 ಲಕ್ಷ ಡಾಲರ್ (73.5 ಲಕ್ಷ ರೂಪಾಯಿ) ದಂಡ ವಿಧಿಸಿದರು ಎಂದು ಆಸ್ಟ್ರೇಲಿಯನ್ ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ.

 ಚೋಖನಿ ಈ ಹಿಂದೆ ಬ್ರಿಸ್ಬೇನ್‌ನ ನಂದಾ ವಿಲೇಜ್ ಶಾಪಿಂಗ್ ಸೆಂಟರ್‌ನಲ್ಲಿ ಕಾಫಿ ತನ್ನ ಹೆಂಡತಿಯೊಂದಿಗೆ ಕಾಫಿ ಕ್ಲಬ್ ನಡೆಸುತ್ತಿದ್ದನು.

 18,000 ಡಾಲರ್ (8.82 ಲಕ್ಷ ರೂಪಾಯಿ) ಮೊತ್ತವನ್ನು ಹಿಂದಕ್ಕೆ ಕೊಡದಿದ್ದರೆ ವೀಸಾ ರದ್ದುಪಡಿಸುವುದಾಗಿ ಉದ್ಯೋಗಿಯನ್ನು ಬೆದರಿಸಲಾಗಿತ್ತು.

ಹಣವನ್ನು ಹಿಂದಕ್ಕೆ ಕೊಡದೆ ಬೇರೆ ಆಯ್ಕೆಯಿಲ್ಲ ಎಂಬುದಾಗಿ ಉದ್ಯೋಗಿ ಭಾವಿಸಿದರು ಎಂದು ಹೇಳಿದ ನ್ಯಾಯಾಧೀಶರು, ಚೋಖನಿಯ ವರ್ತನೆ ಅತ್ಯಂತ ಕೆಟ್ಟದಾಗಿತ್ತು ಹಾಗೂ ಇಬ್ಬರ ನಡುವಿನ ಅಸಮಾನತೆಯ ಹೀನ ದುರುಪಯೋಗವಾಗಿತ್ತು ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News