“ಪಾಕ್ ವಿಜಯಕ್ಕೆ ಭಾರತೀಯ ಮುಸ್ಲಿಮರ ಸಂಭ್ರಮಾಚರಣೆ”: ಮಿಥ್ಯ ಸುದ್ದಿಗಳ ಹಿಂದಿನ ಸತ್ಯಾಸತ್ಯತೆ ಬಯಲು
ಹೊಸದಿಲ್ಲಿ, ಜೂ.20: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಜಯ ಗಳಿಸಿದ್ದಕ್ಕಾಗಿ ಭಾರತದ ಮುಸ್ಲಿಮರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ ಎನ್ನುವ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣಗಳು, ವಾಟ್ಸ್ಯಾಪ್ ನಲ್ಲಿ ಹರಿದಾಡಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ (altnews.in) ಬಹಿರಂಗಪಡಿಸಿದೆ.
ಸೋನಮ್ ಮಹಾಜನ್ ಎನ್ನುವ ಟ್ವಿಟ್ಟರ್ ಅಕೌಂಟೊಂದು ಹಸಿರು ಬಾವುಟ ಹಿಡಿದು ಇಬ್ಬರು ಯುವಕರು ಕೇಕೆ ಹಾಕುತ್ತಾ ತೆರಳುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೋತದ್ದಕ್ಕೆ ಭಾರತೀಯ ಮುಸ್ಲಿಮರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಭಯೋತ್ಪಾದನೆ ಮಾತ್ರವಲ್ಲ. ಇವರಿಗೆ ಧರ್ಮವೂ ಇದೆ. ಪಾಕಿಸ್ತಾನ ಪಂದ್ಯ ಜಯಿಸಿದ ನಂರತ ಭಾರತೀಯ ಮುಲ್ಲಾಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು.
ಬಜರಂಗ ದಳ್ ಎನ್ನುವ ಫೇಸ್ಬುಕ್ ಪೇಜ್ ಕೂಡ ಇದೇ ವಿಡಿಯೋವನ್ನು “ಭಾರತ ಸೋತದ್ದಕ್ಕಾಗಿ ದಿಲ್ಲಿಯಲ್ಲಿ ಮುಸ್ಲಿಮರಿಂದ ಸಂಭ್ರಮಾಚರಣೆ” ಎಂದು ಸುಳ್ಳು ಸುದ್ದಿಯನ್ನು ಹರಡಿತ್ತು.
ಆದರೆ ಈ ವಿಡಿಯೋ ಹಲವು ತಿಂಗಳುಗಳ ಹಿಂದೆಯೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ, ಪಾಕಿಸ್ತಾನದ ಜಯ ಹಾಗೂ ಇದಕ್ಕೆ ಸಂಬಂಧವಿರಲಿಲ್ಲ. 2017ರ ಮಾರ್ಚ್ ನಲ್ಲಿ ಈ ವಿಡಿಯೋ ಸಫ್ವಾನ್ ಖಾನ್ ಎನ್ನುವ ಇನ್ ಸ್ಟಾಗ್ರಾಮ್ ಅಕೌಂಟ್ ನಿಂದ ಪೋಸ್ಟ್ ಆಗಿತ್ತು. ಕೇವಲ ಬೈಕ್ ಸ್ಟಂಟ್ ಮಾಡುವ ವಿಡಿಯೋ ಇದಾಗಿತ್ತು ಹಾಗೂ ಯುವಕರ ಕೈಯಲ್ಲಿದ್ದ ಬಾವುಟ ಪಾಕಿಸ್ತಾನದ ಬಾವುಟವಾಗಿರಲಿಲ್ಲ.
ಇದೇ ರೀತಿ ಮಕ್ಕಳು ಹಾಗೂ ವಯಸ್ಕರು ಗುಂಪೊಂದು ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ವಿ ಸಪೋರ್ಟ್ ಅರ್ನಾಬ್ ಗೋಸ್ವಾಮಿ” ಎನ್ನುವ ಪೇಜ್ ನಲ್ಲಿ ಈ ವಿಡಿಯೋ 11 ಸಾವಿರ ಶೇರ್ ಆಗಿತ್ತು. ಇದೇ ವಿಡಿಯೋ ಯುಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ಹಲವು ಬಾರಿ ಪೋಸ್ಟ್ ಆಗಿತ್ತು.
ಆದರೆ ಈ ವಿಡಿಯೋದಲ್ಲಿರುವ ಚಾನೆಲ್ ಲೋಗೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಲೋಗೊ ಪಾಕಿಸ್ತಾನದ ಚಾನೆಲ್ ಪಿಟಿವಿ ಸ್ಪೋರ್ಟ್ಸ್ ನದ್ದಾಗಿದೆ. ಈ ಚಾನೆಲ್ ಭಾರತದಲ್ಲಿ ಪ್ರಸಾರವಾಗುವುದಿಲ್ಲ. ಪಿಟಿವಿ ಪ್ರಸಾರವಾಗುವ ಪಾಕಿಸ್ತಾನ ಅಥವಾ ಇತರ ದೇಶಗಳಲ್ಲಿ ನಡೆದ ಸಂಭ್ರಮಾಚರಣೆ ಇದಾಗಿದ್ದು, ಪಾಕಿಸ್ತಾನದ ದಾವೂದಿ ಬೋಹ್ರಾ ಸಮುದಾಯದ ಜನರ ಸಂಭ್ರಮಾಚರಣೆ ಎನ್ನಲಾಗಿದೆ.
ಈ ಹಿಂದೆಯೂ ಇದೇ ರೀತಿಯಲ್ಲಿ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲ್ಲೆ ಎನ್ನುವ ವಿಡಿಯೋಗಳ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ (altnews.in) ಬಹಿರಂಗಪಡಿಸಿತ್ತು.