"ನಮ್ಮ ಮಕ್ಕಳು ಪಾಕ್ ಪರ ಘೋಷಣೆ ಕೂಗಿಲ್ಲ, ನಮ್ಮ ವಿರುದ್ಧ ಸಂಚು ನಡೆದಿದೆ"

Update: 2017-06-21 11:36 GMT

ಭೋಪಾಲ್, ಜೂ.21: "ಇದು ನಮ್ಮ ವಿರುದ್ಧದ ಸಂಚು, ದೇಶದ್ರೋಹದ ಆರೋಪ ನಮ್ಮ ಜೀವನವನ್ನು ನಾಶಗೊಳಿಸುವುದು'' ಎಂದು ಮಧ್ಯ ಪ್ರದೇಶದ ಬುರ್ಹಾನಪುರ್ ಜಿಲ್ಲೆಯ ಮುಸ್ಲಿಂ ಬಾಹುಳ್ಯದ ಮೋಹದ್ ಗ್ರಾಮದ ನಿವಾಸಿ ಯೂಸುಫ್ ತಡ್ವಿ ಹೇಳುತ್ತಾರೆ.

ಯೂಸುಫ್ ಅವರ ಇಬ್ಬರು ಅಪ್ರಾಪ್ತ ಸೋದರಳಿಯಂದಿರನ್ನು ದೇಶದ್ರೋಹದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಅವರು ಆಚರಿಸಿದ್ದಾರೆಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಇದೇ ಆರೋಪದ ಮೇಲೆ ಆ  ಗ್ರಾಮದಿಂದ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. 

ಮುಸ್ಲಿಂ ಯುವಕರು ರಸ್ತೆಯಲ್ಲಿ ಸಾಗಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆಂದು ಸ್ಥಳೀಯ ನಿವಾಸಿ ಸುಭಾಶ್ ಲಕ್ಷ್ಮಣ್ ಕೊಲಿ ಎಂಬವರು ನೀಡಿದ ದೂರಿನಾಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆ ಯುವಕರ ಕುಟುಂಬಗಳು ಮಾತ್ರ ಈ ಆರೋಪ ಒಪ್ಪುತ್ತಿಲ್ಲ. ಬಿಜೆಪಿಗೆ ಮತ ನೀಡಿಲ್ಲವೆಂಬ ಕಾರಣಕ್ಕೆ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಯುವಕರ ಪೋಷಕರು ಹೇಳುತ್ತಾರೆ.

"ರಾತ್ರಿ ಸುಮಾರು 1:30ರ ಹೊತ್ತಿಗೆ ನಮ್ಮ ಮನೆಗೆ ನುಗ್ಗಿದ ಪೊಲೀಸರು ನನ್ನ ಪುತ್ರ ಮೆಹಮೂದನ್ನು ಎಳೆದೊಯ್ದರು ಹಾಗೂ ಹಲ್ಲೆಗೈದರು. ನಾವು ಪಾಕಿಸ್ತಾನದ ವಿಜಯವನ್ನು ಆಚರಿಸಲೇ ಇಲ್ಲ,'' ಎಂದು ರಫೀಕ್ ಇಮಾಮ್ ಹೇಳುತ್ತಾರೆ. "ಗ್ರಾಮದಲ್ಲಿ ಎರಡೂ ಸಮುದಾಯಗಳ ಸಾಕಷ್ಟು ಜನಸಂಖ್ಯೆಯಿರುವುದರಿಂದ ಮತೀಯ ಧ್ರುವೀಕರಣಕ್ಕಾಗಿ  ಅವರು ಈ ರೀತಿ ಮಾಡುತ್ತಿದ್ದಾರೆ" ಎಂದು ಬಂಧಿತರ ಕುಟುಂಬಗಳು ವಾದಿಸುತ್ತಿವೆ.

ಈ 15 ಮಂದಿಯ ಬಂಧನದ ನಂತರ ಗ್ರಾಮದಲ್ಲಿ ಭೀತಿಯ ವಾತಾವರಣ ಮನೆ ಮಾಡಿದ್ದು ಹೆಚ್ಚಿನ ಕುಟುಂಬಗಳು ತಮ್ಮ  ಮಕ್ಕಳನ್ನು  ಬೇರೆ ಜಾಗಗಳಿಗೆ ಕಳುಹಿಸಿಕೊಟ್ಟಿವೆ. ದೇಶದ್ರೋಹದ ಆರೋಪದ ಮೇಲೆ ರಾಜ್ಯದಲ್ಲಿ ಬಂಧನಗಳಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಜುಲೈ ತಿಂಗಳಲ್ಲಿ  ಶಾಹದೋಲ್ ಜಿಲ್ಲೆಯ ಬುಧರ್ ಎಂಬ ಪಟ್ಟಣದಲ್ಲಿನ ಖಾಸಗಿ ಶಾಲೆಯೊಂದು ತನ್ನ ಡೈರಿಯಲ್ಲಿ ಜಮ್ಮು ಕಾಶ್ಮೀರವನ್ನು ಭಾರತದ ಭೂಪಟದಲ್ಲಿ ತಪ್ಪಾಗಿ ತೋರಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಎದುರಿಸಿತ್ತು. ಡಿಸೆಂಬರ್ 2015ರಲ್ಲಿ  ಧರ್ ಎಂಬಲ್ಲಿ ನಡೆದ ಮೆರವಣಿಗೆಯೊಂದರ ಸಂದರ್ಭ ಶಿವಾಜಿಯನ್ನು ನಿಂದಿಸಲಾಗಿದೆ ಎಂಬ ಆರೋಪದಲ್ಲಿ ಆರು ಮಂದಿಯ ವಿರುದ್ಧ ಇದೇ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News