ಯೋಗ ದಿನಾಚರಣೆ : ಕೂತಲ್ಲೇ ಶವಾಸನ ಪ್ರದರ್ಶಿಸಿದ ಮಧ್ಯ ಪ್ರದೇಶ ಸಚಿವ !
ಭೋಪಾಲ್, ಜೂ.21: ಅಂತಾರಾಷ್ಟ್ರೀಯ ಯೋಗ ದಿನದಂದು ಮಧ್ಯ ಪ್ರದೇಶದ ಕೃಷಿ ಸಚಿವ ಗೌರಿಶಂಕರ್ ಬಿಸೆನ್ ಕೂತಲ್ಲೇ ನಿದ್ದೆ ಮಾಡಿ ಶವಾಸನ ಪ್ರದರ್ಶಿಸಿದ್ದಾರೆ. ಅದು ಕೂಡ ಯೋಗ ದಿನಾಚರಣೆಯ ಅಂಗವಾಗಿ ಇಂದು ಛಿಂದ್ವಾರದಲ್ಲಿ ನಡೆದ ಸಮಾರಂಭದಲ್ಲಿ.
ಗೌರಿಶಂಕರ್ ಈಗಾಗಲೇ ತಪ್ಪುಗಳಿಗಾಗಿ ಹಲವಾರು ಬಾರಿ ಸುದ್ದಿಯಾಗಿ ಬಿಜೆಪಿ ಸರಕಾರಕ್ಕೆ ಮುಜುಗರ ತಂದವರು. ಛಿಂದ್ವಾರದಲ್ಲಿ ಇಂದು ನಡೆದ ಸಮಾರಂಭದಲ್ಲಿ 2,000 ವಿದ್ಯಾರ್ಥಿಗಳು ಮತ್ತಿತರರೊಂದಿಗೆ ಹಲವಾರು ಆಸನಗಳನ್ನು ಸುಮಾರು ಹತ್ತು ನಿಮಿಷ ಮಾಡಿದ ನಂತರ ಸೋಫಾವೊಂದರಲ್ಲಿ ಕುಳಿತ ಸಚಿವರು ಅಲ್ಲಿಯೇ ನಿದ್ದೆಗೆ ಜಾರಿದರು. ನಂತರ ತಮ್ಮನ್ನು ಸಮರ್ಥಿಸಿಕೊಂಡ ಸಚಿವರು ಸ್ವಲ್ಪ ಅಸೌಖ್ಯದಿಂದಾಗಿ ತಾನು ಸೋಫಾದಲ್ಲಿ ಕುಳಿತುಕೊಂಡೆ ಎಂದರು.
ರಾಜ್ಯ ಶಿಕ್ಷಣ ಸಚಿವ ವಿಜಯ್ ಶಾ ಅವರು ಖಂಡ್ವ ಜಿಲ್ಲೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರೂ ತಮ್ಮ ಮೊಬೈಲ್ ಫೋನಿನಲ್ಲೇ ಕೈಯ್ಯಾಡಿಸುತ್ತಿದ್ದರು. ನಂತರ ಯೋಗದ ಮಹತ್ವ ಸಾರುವ ಭಾಷಣವೊಂದನ್ನೂ ಮಾಡಿದರು. ತಾವೇಕೆ ಯೋಗ ಮಾಡಿಲ್ಲ ಎಂಬುದಕ್ಕೆ ಸಬೂಬು ನೀಡಿದ ಅವರು ತಾವು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ವೈದ್ಯರು ಯೋಗ ಮಾಡದಂತೆ ಸಲಹೆ ನೀಡಿದ್ದಾರೆಂದರು. ತಾವೇನು ಮೊಬೈಲ್ ಫೋನಿನಲ್ಲಿ ವೃಥಾ ಕಾಲಹರಣ ಮಾಡಿಲ್ಲ, ಬದಲಾಗಿ ಪ್ರಧಾನಿ ಮೋದಿಯ ಯೋಗ ದಿನ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ ಎಂದಿದ್ದಾರೆ.