3 ಲಕ್ಷ ಮಂದಿಯಿಂದ ವಿಶ್ವದಾಖಲೆಯ ಯೋಗ ಪ್ರದರ್ಶನ

Update: 2017-06-21 13:03 GMT

 ಅಹಮದಾಬಾದ್ , ಜೂ.21: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ರಾಮ್‌ದೇವ್ ನೇತೃತ್ವದಲ್ಲಿ ಸುಮಾರು 3 ಲಕ್ಷ ಮಂದಿ ಇಲ್ಲಿಯ ಜಿಎಂಡಿಸಿ ಮೈದಾನದಲ್ಲಿ ಯೋಗ ಪ್ರದರ್ಶನ ನೀಡಿದ್ದು ಇದು ವಿಶ್ವದಾಖಲೆಯಾಗಿದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ಇತರ ಹಲವು ರಾಜಕೀಯ ಮುಖಂಡರು, ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು, ಹೈಕೋರ್ಟ್ ನ್ಯಾಯಾಧೀಶರು, ಇತರ ಗಣ್ಯರು ಪಾಲ್ಗೊಂಡಿದ್ದರು.

 ರಾಜ್ಯ ಸರಕಾರ ಮತ್ತು ಪತಂಜಲಿ ಯೋಗಪೀಠದ ವಿಶೇಷ ಆಹ್ವಾನದ ಮೇರೆಗೆ ವಿವಿಧ ಧರ್ಮದ ಮುಖಂಡರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಒಂದೇ ಸ್ಥಳದಲ್ಲಿ ಸುಮಾರು 3 ಲಕ್ಷ ಮಂದಿ ಯೋಗ ಪ್ರದರ್ಶನ ನೀಡಿದ್ದು ಇದು ನೂತನ ಗಿನ್ನೆಸ್ ದಾಖಲೆಯಾಗಿದೆ. ಸ್ಥಳದಲ್ಲಿ ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ರಾಮ್‌ದೇವ್ ತಿಳಿಸಿದ್ದಾರೆ. ಯೋಗ ಪ್ರದರ್ಶನ ಸ್ಥಳದ ಪ್ರವೇಶ ದ್ವಾರದಲ್ಲಿರುವ ಕೇಂದ್ರದಲ್ಲಿ ದಾಖಲಾಗಿರುವ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡವರ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಘೋಷಿಸಲಿದ್ದಾರೆ ಎಂದವರು ತಿಳಿಸಿದರು.

 ಈ ಹಿಂದೆ 2015ರ ಜೂನ್ 21ರಂದು ದಿಲ್ಲಿಯ ರಾಜಪಥ್‌ನಲ್ಲಿ ಪ್ರಧಾನಿ ಮೋದಿಯವರ ಜೊತೆ 35,985 ಮಂದಿ ಯೋಗ ಪ್ರದರ್ಶನ ನೀಡಿದ್ದು ದಾಖಲೆಗೆ ಸೇರಿತ್ತು.

ವೇದಿಕೆಯಲ್ಲಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದ ರಾಮ್‌ದೇವ್, ಅಮಿತ್ ಶಾ ಮತ್ತು ರೂಪಾನಿಯವರನ್ನು ವೇದಿಕೆಗೆ ಆಹ್ವಾನಿಸಿ ತಾವು ಪ್ರದರ್ಶಿಸುವ ಯೋಗಾಸನವನ್ನು ಅನುಕರಿಸುವಂತೆ ಹೇಳಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾ, ಮೋದಿಯವರ ಮನವಿಯಂತೆ ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಆ ಬಳಿಕ ವಿಶ್ವದಾದ್ಯಂತ ಯೋಗದ ಜನಪ್ರಿಯತೆ ಹೆಚ್ಚಿದೆ ಎಂದರು.

 ಗುಜರಾತ್ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ರಾಜ್‌ಕೋಟ್‌ನಲ್ಲಿ ಈಜುಕೊಳದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ 792 ಮಹಿಳೆಯರು ಭಾಗವಹಿಸಿ ‘ಅಕ್ವಾಯೋಗ’ ಪ್ರದರ್ಶನ ನೀಡಿದರು. 

 ಸೈಕಲ್ ಯಾತ್ರೆ.. ಉ.ಪ್ರದೇಶದಾದ್ಯಂತ ‘ಸೈಕಲ್ ಯಾತ್ರೆ’ ಹಮ್ಮಿಕೊಳ್ಳುವ ಮೂಲಕ ಸಮಾಜವಾದಿ ಪಕ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿತು. ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಪಕ್ಷದ ಕಾರ್ಯಕರ್ತರು ಬೆಳಿಗ್ಗೆ 6ಗಂಟೆಗೆ ಸೈಕಲ್ ಯಾತ್ರೆ ನಡೆಸಬೇಕು. ಬಳಿಕ ತಮ್ಮ ಮನೆಯಲ್ಲಿ ಅನುಕೂಲಕ್ಕೆ ತಕ್ಕಂತೆ ಯೋಗ ದಿನ ಆಚರಿಸಿಕೊಳ್ಳಬೇಕು ಎಂದು ಎಸ್ಪಿಯ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸೂಚನೆ ನೀಡಿದ್ದರು.

ಲಕ್ನೊದಲ್ಲಿ ಪ್ರಧಾನಿ ಹಾಗೂ ಉ.ಪ್ರದೇಶ ಮುಖ್ಯಮಂತ್ರಿ ಪಾಲ್ಗೊಳ್ಳುವಿಕೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಗೆ ಪ್ರತಿಯಾಗಿ ಎಸ್ಪಿ ಪಕ್ಷ ಸೈಕಲ್ ಯಾತ್ರೆ ಆಯೋಜಿಸಿದೆ ಎನ್ನಲಾಗಿದೆ. ಸೈಕಲ್ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯಾಗಿದೆ.

ಲಕ್ನೊದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಖಿಲೇಶ್‌ಗೆ ಆಹ್ವಾನ ಇತ್ತಾದರೂ ಅವರು ಪಾಲ್ಗೊಳ್ಳಲಿಲ್ಲ. ಉ.ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಸರಕಾರಿ ಅಧಿಕಾರಿಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದ ದೂರ ಇರುವಂತೆ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News