ದಾರ್ಜಿಲಿಂಗ್: ಅನಿರ್ಧಿಷ್ಟಾವಧಿ ಬಂದ್ ಮುಂದುವರಿಕೆ
ದಾರ್ಜಿಲಿಂಗ್, ಜೂ.21: ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಗೂರ್ಖ ಜನ್‌ಮುಖ್ತಿ ಮೋರ್ಛಾ(ಜಿಜೆಎಂ) ಕರೆ ನೀಡಿರುವ ಅನಿರ್ಧಿಷ್ಟಾವಧಿ ದಾರ್ಜಿಲಿಂಗ್ ಬಂದ್ ಪ್ರತಿಭಟನೆಯಿಂದ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಅಂಗಡಿ, ಹೋಟೆಲ್ ಮತ್ತು ರೆಸ್ಟಾರೆಂಟ್‌ಗಳು ಬಾಗಿಲು ಮುಚ್ಚಿದ್ದವು. ಪೊಲೀಸರು ಮತ್ತು ಭದ್ರತಾ ಪಡೆಗಳು ಗಸ್ತು ನಿರತವಾಗಿದ್ದವು. ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಹಲವೆಡೆ ರ್ಯಾಲಿಗಳನ್ನು ನಡೆಸಲಾಯಿತು. ಭದ್ರತಾ ಪಡೆಗಳನ್ನು ಹಿಂಪಡೆಯುವವರೆಗೆ ಬಂದ್ ನಡೆಯಲಿದೆ ಎಂದು ಜಿಜೆಎಂ ನೇತೃತ್ವದಲ್ಲಿ ಮಂಗಳವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ತ್ರಿಪಕ್ಷೀಯ ಮಾತುಕತೆಯ ಬಳಿಕ ಸಹಿ ಹಾಕಲಾದ ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಎಡ್ಮಿನಿಸ್ಟ್ರೇಷನ್ (ಜಿಟಿಎ) ಒಪ್ಪಂದಿಂದ ತಾನು ಹಿಂದೆ ಸರಿಯುವುದಾಗಿ ಜಿಜೆಎಂ ತಿಳಿಸಿದೆ.
ಜೊತೆಗೆ, ಸರ್ವಪಕ್ಷಗಳ ಸಮನ್ವಯ ಸಮಿತಿಯೊಂದನ್ನು ರಚಿಸಲೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಮಿತಿಯು ಪ್ರಧಾನಿ ಮತ್ತು ಗೃಹ ಸಚಿವರ ಬಳಿಗೆ ನಿಯೋಗ ತೆರಳಿ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯ ರಚನೆಗೆ ಮನವಿ ಮಾಡಿಕೊಳ್ಳಲಿದೆ ಎಂದು ಜಿಜೆಎಂ ವಕ್ತಾರ ಟಿ.ಅರ್ಜುನ್ ಸುದ್ದಿಗಾರರಿಗೆ ತಿಳಿಸಿದರು.
ನಗರದಲ್ಲಿ ಸತತ ನಾಲ್ಕನೇ ದಿನವೂ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿತ್ತು. ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ದಬ್ಬಾಳಿಕೆಯ ಮೂಲಕ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಗುರುವಾರ(ಜೂ.22ರಂದು) ಪ.ಬಂಗಾಲ ಸರಕಾರ ಕರೆದಿರುವ ಸರ್ವಪಕ್ಷಗಳ ಸಭೆಯನ್ನು ಬಹಿಷ್ಕರಿಸುವುದಾಗಿ ಜಿಜೆಎಂ ಮತ್ತು ಮಂಗಳವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷಗಳು ತಿಳಿಸಿವೆ.