10 ಸಾವಿರಕ್ಕಿಂತಲೂ ಅಧಿಕ ಎನ್‌ಜಿಒಗಳ ಪರವಾನಿಗೆ ರದ್ದು ?
ಹೊಸದಿಲ್ಲಿ, ಜೂ. 21: ವಾರ್ಷಿಕ ಆದಾಯ ಹಾಗೂ ವೆಚ್ಚದ ದಾಖಲೆಯನ್ನು ಸರಕಾರಕ್ಕೆ ಸಲ್ಲಿಸಲು ವಿಫಲವಾದಲ್ಲಿ ವಿದೇಶ ದೇಣಿಗೆ ಪಡೆಯುತ್ತಿರುವ 10 ಸಾವಿರಕ್ಕೂ ಅಧಿಕ ಸರಕಾರೇತರ ಸಂಸ್ಥೆಗಳು ತಮ್ಮ ಪರವಾನಿಗೆ ಕಳೆದಕೊಳ್ಳಲಿವೆ.
ಒಟ್ಟು 18,523 ಎನ್‌ಜಿಒಗಳಿಗೆ ತಮ್ಮ ಆದಾಯದ ಬಗ್ಗೆ ವಿವರ ನೀಡಲು ಈ ವರ್ಷ ಮೇಯಲ್ಲಿ ಒಂದು ಬಾರಿಯ ಅವಕಾಶವನ್ನು ಕೇಂದ್ರ ಗೃಹ ಸಚಿವಾಲಯ ನೀಡಿತ್ತು.
2010-11ರಿಂದ 2014-15ರ ವರೆಗಿನ ವಾರ್ಷಿಕ ಆದಾಯ ಹಾಗೂ ವೆಚ್ಚವನ್ನು ಅಪ್ ಲೋಡ್ ಮಾಡಲು ಕೊನೆ ದಿನಾಂಕ 2017 ಜೂನ್ 14. ಎಲ್ಲ ವಾರ್ಷಿಕ ಆದಾಯ ಹಾಗೂ ವೆಚ್ಚವನ್ನು ಅಪ್‌ಲೋಡ್ ಮಾಡಲು ವಿಫಲವಾದಲ್ಲಿ ಸಂಸ್ಥೆಗಳ ನೋಂದಣಿ/ಈಗಾಗಲೇ ನೀಡಿದ ನವೀಕರಣ ರದ್ದುಗೊಳಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಣಿಯಾಗಿ ಕೆಲವು ವರ್ಷ ಹಾಗೂ 2010-11 ಹಾಗೂ 2014-15 ನಡುವಿನ 5 ವರ್ಷಗಳಲ್ಲಿ ಆದಾಯ ಹಾಗೂ ವೆಚ್ಚದ ಬಗ್ಗೆ ವಿವರ ದಾಖಲಿಸದ 18,253ಕ್ಕೂ ಅಧಿಕ ಎನ್‌ಜಿಒಗಳಿಗೆ ಮೇ 12ರಂದು ನೋಟಿಸು ಜಾರಿ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ತಪ್ಪೆಸಗಿರುವ ಎನ್‌ಜಿಒಗಳಿಗೆ ಕೊನೆ ಅವಕಾಶ ನೀಡಲಾಗುವುದು ಎಂದು ಹೇಳಿರುವ ಸಚಿವಾಲಯ, ಆದಾಯ ಹಾಗೂ ವೆಚ್ಚದ ವಿವರಗಳನ್ನು ವಿಳಂಬವಾಗಿ ಸಲ್ಲಿಸುವ ಎನ್‌ಜಿಒಗಳಿಗೆ ಯಾವುದೇ ರೀತಿಯ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ.