ಭಾರತೀಯ ಬಾಲಕ ರಿಫಾತ್ ನಿರ್ಮಿಸಿದ ವಿಶ್ವದ ಅತಿ ಸಣ್ಣ ಉಪಗ್ರಹ ನಾಸಾದಿಂದ ಉಡಾವಣೆ

Update: 2017-06-22 13:03 GMT

ಹೊಸದಿಲ್ಲಿ,ಜೂ.22: ವಿಶ್ವದ ಅತಿ ಸಣ್ಣ ಉಪಗ್ರಹವೊಂದನ್ನು ತಮಿಳುನಾಡಿನ ರಿಫಾತ್ ಶಾರುಖ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡವೊಂದು ನಿರ್ಮಿಸುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. 64 ಗ್ರಾಂ ಭಾರದ ಈ ಉಪಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬುಧವಾರ ಉಡಾವಣೆಗೊಳಿಸಿದೆ.

ತಮಿಳುನಾಡಿನ ಪಲ್ಲಪಟ್ಟಿಯ ನಿವಾಸಿಯಾದ 18 ವರ್ಷದ ವಿದ್ಯಾರ್ಥಿ ರಿಫಾತ್ ಶಾರುಖ್ ನಾಸಾಕ್ಕಾಗಿ ಅತ್ಯಂತ ಸಣ್ಣದಾದ ಹಾಗೂ ಹಗುರವಾದ ಈ ಉಪಗ್ರಹವನ್ನು ನಿರ್ಮಿಸಿರುವ ತಂಡದ ನೇತೃತ್ವ ವಹಿಸಿದ್ದರು. ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅವರ ನೆನಪಿಗಾಗಿ ‘ಕಲಾಂಸ್ಯಾಟ್’ ಎಂದು ಹೆಸರಿಡಲಾದ ಉಪಗ್ರಹದ ಉಡಾವಣೆಯೊಂದಿಗೆ, ರಿಫಾತ್ ಜಾಗತಿಕ ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಅಮೆರಿಕದ ವ್ಯಾಲೊಪ್ಸ್ ದ್ವೀಪದಲ್ಲಿರುವ ನಾಸಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಜೂನ್ 21ರಂದು ವಿಶ್ವದ ಈ ಅತ್ಯಂತ ಕಿರಿಯ ಉಪಗ್ರಹವನ್ನು ಉಡಾವಣೆಗೊಳಿಸಲಾಗಿದೆ. ಉಡಾವಣೆ ಬಳಿಕ 240 ನಿಮಿಷಗಳ ಕಾಲ ಭೂಕಕ್ಷೆಯಲ್ಲಿ ಉಪಗ್ರಹ ಕಾರ್ಯನಿರ್ವಹಿಸಿತ್ತು. ಆನಂತರ ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಕ ವಾತಾವರಣದಲ್ಲಿ ಅದು 12 ನಿಮಿಷಗಳವರೆಗೆ ಕಾರ್ಯಾಚರಿಸಿರುವುದಾಗಿ ರಿಫಾತ್ ಹೇಳಿದ್ದಾರೆ.

 3-ಡಿ ಮುದ್ರಿತ ಕಾರ್ಬನ್ ಫೈಬರ್‌ನ ಕಾರ್ಯನಿರ್ವಹಣೆಯನ್ನು ಪ್ರದರ್ಶಿಸುವುದೇ ಈ ಉಪಗ್ರಹದ ಮುಖ್ಯ ಪಾತ್ರವಾಗಿತ್ತೆಂದು ರಿಫಾತ್ ತಿಳಿಸಿದ್ದಾರೆ. ನಾಸಾ ಹಾಗೂ ‘ಐ ಡೂಡ್ಲ್ ಲರ್ನಿಂಗ್’ ಎಂಬ ಸಂಘಟನೆ ಜಂಟಿಯಾಗಿ ಆಯೋಜಿಸಿದ್ದ ‘ಕ್ಯೂಬ್ಸ್ ಇನ್ ಸ್ಪೇಸ್’ ಎಂಬ ಸ್ಪರ್ಧೆಯಲ್ಲಿ ತಾನು ಭಾಗವಹಿಸಿದ್ದು, ಅದರಲ್ಲಿ ಈ ಉಪಗ್ರಹವು ಉಡಾವಣೆಗೆ ಆಯ್ಕೆಯಾಗಿದ್ದಾಗಿ ರಿಫಾತ್ ವಿವರಿಸಿದ್ದಾರೆ.

ಬಾಹ್ಯಾಕಾಶಕ್ಕೆ ಕಳುಹಿಸುವಂತಹ ನಿಖರವಾಗಿ ನಾಲ್ಕು ಮೀಟರ್ ಗಾತ್ರದ ಹಾಗೂ ನಿಖರವಾಗಿ 64 ಗ್ರಾಂ. ಭಾರದ ಕ್ಯೂಬ್ (ಘನ) ಉಪಗ್ರಹವನ್ನು ನಿರ್ಮಿಸುವುದೇ ಈ ಸ್ಪರ್ಧೆಯ ಮುಖ್ಯ ಸವಾಲಾಗಿತ್ತು. ಈ ವಿಶಿಷ್ಟವಾದ ಉಪಗ್ರಹದಲ್ಲಿ ಭೂಮಿಯ ಚಲನೆಯ ವೇಗ, ಪರಿಭ್ರಮಣ ಹಾಗೂ ವಿದ್ಯುತ್ಕಾಂತೀಯ ವಲಯವನ್ನು ಅಳೆಯಲು ವಿನೂತನ ರೀತಿಯ ಆನ್‌ಬೋರ್ಡ್ ಕಂಪ್ಯೂಟರ್ ಹಾಗೂ ಎಂಟು ಸ್ವದೇಶಿ ನಿರ್ಮಿತ ಸೆನ್ಸರ್‌ಗಳನ್ನು ಅಳವಡಿಸಲಾಗಿತ್ತು ಎಂದು ರಿಫಾತ್ ತಿಳಿಸಿದ್ದಾರೆ.

‘ಸ್ಪೇಸ್ ಕಿಡ್ಸ್ ಇಂಡಿಯಾ’ ಎಂಬ ಸಂಘಟನೆ ಈ ಉಪಗ್ರಹದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವುದಾಗಿ ರಿಫಾತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News