ದ.ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆಗಾಗಿ ಇನ್ನೂ 2000 ಯೋಧರ ರವಾನೆ

Update: 2017-06-22 12:59 GMT

ಅನಂತನಾಗ್,ಜೂ.22: ಹೆಚ್ಚುತ್ತಿರುವ ಉಗ್ರಗಾಮಿ ಚಟುವಟಿಕೆಗಳಿಂದಾಗಿ ನೂತನ ‘ಗ್ರೌಂಡ್ ಝೀರೊ’ ಎಂದು ಬಣ್ಣಿಸಲಾಗುತ್ತಿರುವ ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲು ಸುಮಾರು 2,000 ಯೋಧರನ್ನೊಳಗೊಂಡ ಎರಡು ಹೆಚ್ಚುವರಿ ಸೇನಾ ಬಟಾಲಿಯನ್‌ಗಳನ್ನು ರವಾನಿಸಲಾಗಿದೆ.

ಹೆಚ್ಚುವರಿ ಪಡೆಗಳು ಕುಲ್ಗಾಮ್, ಅನಂತನಾಗ್, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದು, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿಯ ಕೆಲವು ಸೇನಾ ಶಿಬಿರಗಳನ್ನು ಪುನಃಶ್ಚೇತನಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದ.ಕಾಶ್ಮೀರದಲ್ಲಿ ಸುರಕ್ಷತೆಯ ಹೊಣೆಯನ್ನು ಹೊತ್ತುಕೊಂಡಿರುವ ಸೇನೆಯ ವಿಕ್ಟರ್ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಮೇ|ಜ|ಬಿ.ಎಸ್.ರಾಜು ಅವರು ಬುಧವಾರ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

 ದ.ಕಾಶ್ಮೀರವು ಉಗ್ರಗಾಮಿಗಳ ಮುಖ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು, ಉಗ್ರರಿಂದ ಬೆದರಿಕೆಗೊಳಗಾಗುವ ಸಾಧ್ಯತೆಯಿರುವ ಸ್ಥಳೀಯರಿಗೆ ನೆರವಾಗಲು ಈ ನಾಲ್ಕು ಜಿಲ್ಲೆಗಳಲ್ಲಿ ಸೇನಾ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಗ್ರಾಮಸ್ಥರೊಂದಿಗೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸೇನೆಯು ಬಂಡಾಯ ನಿಗ್ರಹ ಕಾರ್ಯಾಚರಣೆಗಳ ಸಂದರ್ಭ ಆ ಸ್ಥಳದಿಂದ ದೂರವುಳಿಯುವ ಅಗತ್ಯದ ಬಗ್ಗೆ ಅವರಿಗೆ ತಿಳಿಹೇಳುತ್ತಿದೆ.

ಸೇನೆಯ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡಲು ಉಗ್ರಗಾಮಿ ಗುಂಪುಗಳ ಸದಸ್ಯರು ಸ್ಥಳೀಯರನ್ನು ಗುಂಡಿನ ಕಾಳಗ ನಡೆಯುವ ಸ್ಥಳಗಳಿಗೆ ಬಲವಂತದಿಂದ ಕಳುಹಿಸುತ್ತವೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News