ಸಾವಿರಾರು ಜನರ ಉಪಸ್ಥಿತಿಯಲ್ಲಿ ಮುಸ್ಲಿಮ್ ಬಾಲಕಿಯ ಅಂತ್ಯಸಂಸ್ಕಾರ

Update: 2017-06-22 14:53 GMT

ಸ್ಟರ್ಲಿಂಗ್ (ಅಮೆರಿಕ), ಜೂ. 22: ಮಸೀದಿಯೊಂದರಿಂದ ಹೊರಬಂದ ವೇಳೆ ಕಾರುಚಾಲಕನೊಬ್ಬನಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾದ 17 ವರ್ಷದ ಮುಸ್ಲಿಮ್ ಬಾಲಕಿ ನಬ್ರಾ ಹಸನನ್‌ರ ಅಂತ್ಯಸಂಸ್ಕಾರ ವರ್ಜೀನಿಯದಲ್ಲಿ ಬುಧವಾರ ನಡೆದಿದ್ದು, ಸಾವಿರಾರು ಮಂದಿ ಪಾಲ್ಗೊಂಡರು.

ಜನಪ್ರವಾಹದ ಹಿನ್ನೆಲೆಯಲ್ಲಿ ರಸ್ತೆ ಬಂದ್ ಆದಾಗ ಭಾರೀ ಸಂಖ್ಯೆಯ ಜನರು ತಮ್ಮ ಕಾರುಗಳಿಂದ ಇಳಿದು ಸುಮಾರು ಒಂದೂವರೆ ಕಿಲೋಮೀಟರ್ ದೂರ ನಡೆದೇ ಹೋದರು.

‘‘ಮಗುವೊಂದನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುಃಖ ಇನ್ನೊಂದಿಲ್ಲ, ಅದರಲ್ಲೂ ವಿಶೇಷವಾಗಿ ನಬ್ರಾಳನ್ನು ಕಳೆದುಕೊಂಡ ರೀತಿ ಅತ್ಯಂತ ಆಘಾತಕರ’’ ಎಂದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಮಾರು 5,000 ಮಂದಿಯನ್ನು ಉದ್ದೇಶಿಸಿ ಮಾತನಾಡಿದ ‘ಆಲ್ ಡಲ್ಸ್ ಏರಿಯ ಮುಸ್ಲಿಮ್ ಸೊಸೈಟಿ’ಯ ಧಾರ್ಮಿಕ ನಾಯಕ ಇಮಾಮ್ ಮುಹಮ್ಮದ್ ಮಗೀದ್ ಹೇಳಿದರು.

ರವಿವಾರ ಮುಂಜಾನೆ ನಬ್ರಾ ತನ್ನ ಹದಿಹರೆಯದ ಗೆಳತಿಯರೊಂದಿಗೆ ಮಸೀದಿಯಿಂದ ಹೊರಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಕಾರು ಚಾಲಕನೊಬ್ಬ ಈ ಗುಂಪಿನ ಮಕ್ಕಳೊಂದಿಗೆ ಜಗಳಕ್ಕೆ ಇಳಿದಿದ್ದು, ಜಗಳ ವಿಕೋಪಕ್ಕೆ ಹೋಗಿ ಕಾರು ಚಾಲಕ ಬೇಸ್‌ಬಾಲ್ ಬ್ಯಾಟ್‌ನಿಂದ ನಬ್ರಾಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News