“ನಮಗೆ ಮತ ನೀಡದಿದ್ದಲ್ಲಿ ಪಿಂಚಣಿ ಪಡೆಯಬೇಡಿ, ರಸ್ತೆಗಳನ್ನು ಉಪಯೋಗಿಸಬೇಡಿ”: ಆಂಧ್ರ ಸಿಎಂ

Update: 2017-06-22 14:54 GMT

ಹೈದರಾಬಾದ್, ಜೂ.22: “ನೀವು ನನ್ನ ಸರಕಾರವನ್ನು ಇಷ್ಟಪಡದಿದ್ದಲ್ಲಿ ಸರಕಾರ ನೀಡುತ್ತಿರುವ ಪಿಂಚಣಿಯನ್ನು ಪಡೆದುಕೊಳ್ಳಬೇಡಿ ಹಾಗೂ ಸರಕಾರ ನಿರ್ಮಿಸಿರುವ ರಸ್ತೆಗಳಲ್ಲಿ ಸಂಚರಿಸಬೇಡಿ” ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಸರಕಾರ ನೀಡುವ ಪಿಂಚಣಿಯನ್ನು ನೀವು ಬಯಸುತ್ತೀರಿ. ನನ್ನ ಸರಕಾರ ನಿರ್ಮಿಸಿದ ರಸ್ತೆಯಲ್ಲಿ ಸಂಚರಿಸುತ್ತೀರಿ. ಆದರೆ ನನಗೆ ಮತ ನೀಡಲು ನೀವು ಬಯಸುವುದಿಲ್ಲ. ಇದನ್ನು ಹೇಗೆ ಸಮರ್ಥಿಸಬಹುದು?” ಎಂದು ಪ್ರಶ್ನಿಸಿದರು.

“ನನ್ನ ಸರಕಾರವನ್ನು ನೀವು ಇಷ್ಟಪಡುವುದಿಲ್ಲವಾದಲ್ಲಿ ಪಿಂಚಣಿ ಪಡೆಯಬೇಡಿ ಹಾಗೂ ರಸ್ತೆಗಳಲ್ಲಿ ಸಂಚರಿಸಬೇಡಿ” ಎಂದವರು ಹೇಳಿದರು.

“ನಮ್ಮಿಂದ ಹಲವು ಸೌಲಭ್ಯಗಳನ್ನು ಪಡೆದುಕೊಂಡ ಮೇಲೂ ಅವರು ನಮಗೆ ಅವರು ಮತ ನೀಡಲು ಒಪ್ಪದಿದ್ದಲ್ಲಿ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿ, ನಮಗೆ ಮತ ನೀಡದ ಗ್ರಾಮಗಳನ್ನು  ನಿರ್ಲಕ್ಷಿಸಲು ನಾನು ಹಿಂಜರಿಯುವುದಿಲ್ಲ” ಎಂದು ಚಂದ್ರಬಾಬು ನಾಯ್ಡು ಹೇಳಿದರು.

ತಮ್ಮ ಸರಕಾರ 1.50ವರೆಗಿನ ರೈತರ ಬೆಳೆಸಾಲವನ್ನು ಮನ್ನಾ ಮಾಡಿದೆ. ಹಿರಿಯರಿಗೆ, ವಿಕಲಚೇತನರಿಗೆ, ಬಡ ವರ್ಗದವರಿಗೆ ಪಿಂಚಣಿ ನೀಡುತ್ತಿದೆ. ಇಷ್ಟೇ ಅಲ್ಲದೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಇಷ್ಟೆಲ್ಲಾ ಆದರೂ ಜನರು ಮತ್ತೆ ಮತ್ತೆ ಭ್ರಷ್ಟಾಚಾರಿ ನಾಯಕರಿಂದ ಹಣ ಪಡೆದು ಮತ ನೀಡುತ್ತಾರೆ ಎಂದು ಚಂದ್ರಬಾಬು ನಾಯ್ಡು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News