8 ವರ್ಷದ ಕೆಳಗಿನವರಿಗೆ, 60 ಮೇಲ್ಪಟ್ಟವರಿಗೆ ಪಾಸ್ ಪೋರ್ಟ್ ಅರ್ಜಿ ಶುಲ್ಕದಲ್ಲಿ ಇಳಿಕೆ

Update: 2017-06-23 11:04 GMT

ನವದೆಹಲಿ, ಜೂ. 23: ಎಂಟು ವರ್ಷದ ಕೆಳಗಿನ ಹಾಗೂ 60 ವರ್ಷಕ್ಕೆ ಮೇಲ್ಪಟ್ಟ ಪಾಸ್ ಪೋರ್ಟ್ ಅರ್ಜಿದಾರರಿಗೆ ಪಾಸ್ ಪೋರ್ಟ್ ಅರ್ಜಿ ಶುಲ್ಕವನ್ನು ಇಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಈ ಹಿಂದೆ ಎಲ್ಲಾ ಹೊಸ ಪಾಸ್ ಪೋರ್ಟ್‌ಗಳನ್ನು ಕೇವಲ ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತಿದ್ದರೆ ಇನ್ನು ಮುಂದೆ ಪಾಸ್ ಪೋರ್ಟ್‌ಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲೂ ಲಭ್ಯವಾಗುವುದು ಎಂದು ಪಾಸ್ ಪೋರ್ಟ್ ಕಾಯಿದೆ 1967 ಇದರ ಜಾರಿಯಾಗಿ 50 ವರ್ಷಗಳ ಸವಿನೆನಪಿಗಾಗಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಶುಕ್ರವಾರ ಮಾತನಾಡಿದ ಸುಷ್ಮಾ ಹೇಳಿದರು.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಯ ನಿಯಮಗಳನ್ನು ಸಚಿವೆ ಸಡಿಲಗೊಳಿಸಿದ್ದರು. ಜನ್ಮ ದಿನಾಂಕದ ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ ಈ ಹಿಂದೆ ಕಡ್ಡಾಯವಾಗಿದ್ದರೆ ಈ ನಿಯಮವನ್ನು ಕೈಬಿಡಲಾಗಿತ್ತು. ಪ್ರತ್ಯೇಕಗೊಂಡಿರುವ ಅಥವಾ ವಿಚ್ಛೇದಿತ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಮ್ಮ ಮಾಜಿ ಪತಿ ಯಾ ಪತ್ನಿಯ ಹೆಸರನ್ನೂ ಉಲ್ಲೇಖಿಸಬೇಕಾಗಿಲ್ಲ ಎಂದು ಹೊಸ ನಿಯಮಗಳು ಹೇಳಿದ್ದವಲ್ಲದೆ, ಸಾಧುಗಳು ಹಾಗೂ ಸನ್ಯಾಸಿಗಳು ತಮ್ಮ ಹೆತ್ತವರ ಬದಲು ತಮ್ಮ ಆಧ್ಯಾತ್ಮಿಕ ಗುರುಗಳ ಹೆಸರನ್ನು ಅರ್ಜಿಯಲ್ಲಿ ನಮೂದಿಸಬಹುದೆಂದೂ ಹೇಳಲಾಗಿತ್ತು.

ಕಳೆದ ಡಿಸೆಂಬರ್ ತಿಂಗಳಲ್ಲಿ ಬದಲಾದ ನಿಯಮಗಳಂತೆ ಅರ್ಜಿದಾರರು ಮ್ಯಾಟ್ರಿಕ್ಯುಲೇಶನ್ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್, ಆಧಾರ್, ಇ-ಆಧಾರ್ ಕಾರ್ಡುಗಳಲ್ಲಿ ಯಾವುದಾದರೂ ಒಂದನ್ನು ಅರ್ಜಿ ಸಲ್ಲಿಸುವ ವೇಳೆ ತಮ್ಮ ಜನ್ಮ ದಿನಾಂಕ ದೃಢೀಕರಿಸಲು ಹಾಜರು ಪಡಿಸಬೇಕೆಂದು ಹೇಳಲಾಗಿತ್ತು. ಹೊಸ ನಿಯಮಗಳನ್ವಯ ಪಾಸ್ ಪೋರ್ಟ್ ಅರ್ಜಿದಾರರು ತಮ್ಮ ಸೇವಾ ದಾಖಲೆ, ಚಾಲನಾ ಪರವಾನಗಿ, ಮತದಾರರ ಗುರುತು ಚೀಟಿ ಅಥವಾ ಎಲ್ ಐ ಸಿ ಪಾಲಿಸಿ ಬಾಂಡಿನ ಪ್ರತಿಯನ್ನೂ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News