‘ಭೂತದ ಆಜ್ಞೆ’ಯಂತೆ ಮಗುವಿನ ಕಿವಿಗಳನ್ನು ಕತ್ತರಿಸಿದ ಮಲತಂದೆ

Update: 2017-06-23 11:04 GMT

ಹೊಸದಿಲ್ಲಿ,ಜೂ.23: ಪೂರ್ವ ದಿಲ್ಲಿಯ ಜಿಟಿಬಿ ಎನ್‌ಕ್ಲೇವ್‌ನಲ್ಲಿ ಗುರುವಾರ ವ್ಯಕ್ತಿಯೋರ್ವ ತನ್ನ ಮಲಮಗಳ ಎರಡೂ ಕಿವಿಗಳನ್ನು ಕತ್ತರಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಮೃತ್ ಬಹಾದೂರ್(35) 17 ವರ್ಷಗಳ ಹಿಂದೆ ನೇಪಾಳದಿಂದ ದಿಲ್ಲಿಗೆ ಬಂದು ತನ್ನ ಅಣ್ಣನ ಮನೆಯಲ್ಲಿ ವಾಸವಿದ್ದು, ಕ್ಲೀನರ್ ಕೆಲಸ ಮಾಡಿಕೊಂಡಿದ್ದ. ಕೆಲವು ವರ್ಷಗಳ ಹಿಂದೆ ಅಣ್ಣನ ನಿಧನದ ಬಳಿಕ ಅತ್ತಿಗೆಯನ್ನೇ ವಿವಾಹವಾಗಿದ್ದ. ಈಗ ಕಿವಿಗಳನ್ನು ಕಳೆದುಕೊಂಡಿರುವ ಮಗು ಬೀನಾ ಅಮೃತ್‌ನ ಅಣ್ಣನ ಮಗಳಾಗಿದ್ದಾಳೆ.

ಗುರುವಾರ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಅಮೃತ್ ಬೀನಾಳ ಎರಡೂ ಕಿವಿಗಳನ್ನು ಕತ್ತರಿಸಿ ಪ್ರತ್ಯೇಕಗೊಳಿಸಿದ್ದ. ಆಕೆಯ ಬೊಬ್ಬೆ ಕೇಳಿ ತಾಯಿ ಎದ್ದು ಬಂದಾಗ ಅಮೃತ ಆಕೆಯ ಮೇಲೂ ಹಲ್ಲೆಗೆ ಯತ್ನಿಸಿದ್ದ. ನೆರೆಕರೆಯವರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವಿನ ಕತ್ತನ್ನು ಸೀಳಲು ಮುಂದಾಗಿದ್ದ ಅಮೃತ್‌ನನ್ನು ಹಿಡಿದು ಆತನ ಕೈಯಲ್ಲಿದ್ದ ಚೂರಿಯನ್ನು ಕಿತ್ತುಕೊಳ್ಳುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.

 ಕೆಲವು ಸಮಯ ಹಿಂದೆ ಇನ್ನೋರ್ವ ಪುತ್ರಿಯ ನಿಧನದ ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆನ್ನಲಾಗಿರುವ ಅಮೃತ್ ‘‘ಬೀನಾ ಬದುಕಿರಬೇಕೆಂದರೆ ಆಕೆ ಅಳುವಂತೆ ಮಾಡಬೇಕು ಎಂದು ನನಗೆ ಭೂತವು ಹೇಳಿತ್ತು. ಅದರಂತೆ ನಾನು ನಿದ್ರಿಸಿದ್ದ ಆಕೆಯ ಮೇಲೆ ನೀರು ಎರಚಿ ಅಳುವಂತೆ ಮಾಡಿದ್ದೆ. ಬಳಿಕ ಭೂತವು ರಕ್ತ ಬೇಕೆಂದು ಹೇಳಿತ್ತು. ಹೀಗಾಗಿ ನಾನು ಬೀನಾಳ ಕಿವಿಗೆ ಸಣ್ಣಗಾಯವನ್ನು ಮಾಡಿದ್ದೆ. ಆದರೆ ಭೂತವು ಇಡೀ ಕಿವಿಗಳೇ ಬೇಕೆಂದು ಆದೇಶಿಸಿದ್ದು, ಎರಡೂ ಕಿವಿಗಳನ್ನು ಕತ್ತರಿಸಿ ಭೂತವು ತೆಗೆದುಕೊಂಡು ಹೋಗಲೆಂದು ಕೋಣೆಯ ಮೂಲೆಯಲ್ಲಿರಿಸಿದ್ದೆ’’ ಎಂದು ಹೇಳಿಕೊಂಡಿದ್ದಾನೆ.

ಬೀನಾಳನ್ನು ಗುರು ತೇಗ್‌ಬಹಾದೂರ್ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು ಕತ್ತರಿಸಲಾಗಿದ್ದ ಕಿವಿಗಳನ್ನು ವೈದ್ಯರಿಗೆ ಹಸ್ತಾಂತರಿಸಿದ್ದಾರೆ. ಏಮ್ಸ್‌ನ ವೈದ್ಯರ ನೆರವಿನೊಂದಿಗೆ ಬೀನಾಳಿಗೆ ಕಿವಿಗಳನ್ನು ಮರಳಿ ಜೋಡಿಸಲು ವೈದ್ಯರು ಪ್ರಯತ್ನಿಸಲಿದ್ದಾರೆ. ಕೊಲೆ ಯತ್ನ ಆರೋಪದಲ್ಲಿ ಅಮೃತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News