‘ಮಿತ್ರ’ ಸ್ಥಾನಮಾನವನ್ನು ಪಾಕ್‌ನಿಂದ ಹಿಂದಕ್ಕೆ ಪಡೆಯುವ ಮಸೂದೆ ಮಂಡನೆ: ಅಮೆರಿಕ

Update: 2017-06-23 13:38 GMT

ವಾಶಿಂಗ್ಟನ್, ಜೂ. 23: ಪಾಕಿಸ್ತಾನವು ಅಮೆರಿಕದ ‘ಪ್ರಮುಖ ನ್ಯಾಟೋಯೇತರ ಮಿತ್ರ’ (ಎಂಎನ್‌ಎನ್‌ಎ) ಎಂಬ ಸ್ಥಾನಮಾನವನ್ನು ಹಿಂದಕ್ಕೆ ಪಡೆಯಬೇಕೆಂದು ಕೋರುವ ಮಸೂದೆಯೊಂದನ್ನು ಇಬ್ಬರು ಸಂಸದರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.

ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಲ್ಲಿ ವಿಫಲವಾಗಿದೆ ಎಂದು ಮಸೂದೆ ಹೇಳುತ್ತದೆ.

ರಿಪಬ್ಲಿಕನ್ ಕಾಂಗ್ರೆಸಿಗ ಟೆಡ್ ಪೋ ಮತ್ತು ಡೆಮಾಕ್ರಟಿಕ್ ಸಂಸದ ರಿಕ್ ನೋಲನ್ ಮಂಡಿಸಿರುವ ಮಸೂದೆಯು, ಪಾಕಿಸ್ತಾನಕ್ಕೆ ನೀಡಲಾಗಿರುವ ಎಂಎನ್‌ಎನ್‌ಎ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವಂತೆ ಸರಕಾರಕ್ಕೆ ಕರೆ ನೀಡುತ್ತದೆ.

ಈ ಸ್ಥಾನಮಾನವನ್ನು 2004ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಪಾಕಿಸ್ತಾನಕ್ಕೆ ನೀಡಿದ್ದರು. ಅಲ್-ಖಾಯಿದ ಮತ್ತು ತಾಲಿಬಾನ್ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಪಾಕಿಸ್ತಾನದ ಸಹಾಯವನ್ನು ಪಡೆಯುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿತ್ತು.

‘‘ಪಾಕಿಸ್ತಾನದ ಕೈಗಳಲ್ಲಿರುವ ಅಮೆರಿಕದ ರಕ್ತಕ್ಕಾಗಿ ಆ ದೇಶವನ್ನು ಹೊಣೆಯಾಗಿಸಲೇಬೇಕು’’ ಎಂದು ವಿದೇಶ ವ್ಯವಹಾರಗಳ ಸಮಿತಿಯ ಸದಸ್ಯರಾಗಿರುವ ಪೋ ಹೇಳಿದರು. ಅವರು ಭಯೋತ್ಪಾದನೆ, ಪರಮಾಣು ಪ್ರಸರಣ ನಿಷೇಧ ಮತ್ತು ವ್ಯಾಪಾರ ಕುರಿತ ಉಪಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.

‘‘ತಾನು ಅಮೆರಿಕದ ಮಿತ್ರದೇಶದಂತೆ ಪಾಕಿಸ್ತಾನ ಹಲವಾರು ವರ್ಷಗಳಿಂದ ನಟಿಸುತ್ತಾ ಬಂದಿದೆ. ಅದೇ ವೇಳೆ, ಅದು ಉಸಾಮ ಬಿನ್ ಲಾದನ್‌ಗೆ ಆಶ್ರಯ ನೀಡಿದೆ ಹಾಗೂ ತಾಲಿಬಾನ್‌ಗೆ ಬೆಂಬಲ ನೀಡಿದೆ. ಆದರೆ, ಭಯೋತ್ಪಾದಕರ ವಿರುದ್ಧ ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News