'ಇರಾನ್ ಮೀನುಗಾರರನ್ನು ಬಿಡಿ'

Update: 2017-06-23 13:59 GMT

ಅಂಕಾರ (ಟರ್ಕಿ), ಜೂ. 23: ಮೂವರು ಇರಾನಿಯನ್ ಮೀನುಗಾರರನ್ನು ಬಿಡುಗಡೆ ಮಾಡಿ, ಓರ್ವ ನಾವಿಕನನ್ನು ಗುಂಡು ಹಾರಿಸಿ ಕೊಂದಿರುವುದಕ್ಕೆ ಪರಿಹಾರ ನೀಡಿ ಮತ್ತು ಈ ‘ಬೇಜವಾಬ್ದಾರಿಯುತ ಕೃತ್ಯ’ದ ಹಿಂದಿರುವವರನ್ನು ಶಿಕ್ಷಿಸಿ ಎಂದು ಇರಾನ್ ತನ್ನ ಪ್ರಾದೇಶಿಕ ಎದುರಾಳಿ ಸೌದಿ ಅರೇಬಿಯವನ್ನು ಗುರುವಾರ ಒತ್ತಾಯಿಸಿದೆ.

ಕೊಲ್ಲಿಯಲ್ಲಿರುವ ಇರಾನ್‌ನ ಮೀನುಗಾರಿಕಾ ದೋಣಿಗಳ ಮೇಲೆ ಸೌದಿಯ ಗಡಿ ಯೋಧರು ಗುಂಡು ಹಾರಿಸಿ ಓರ್ವ ಮೀನುಗಾರನನ್ನು ಕೊಂದಿದ್ದಾರೆ ಎಂಬುದಾಗಿ ಇರಾನ್ ಮಾಧ್ಯಮ ಕಳೆದ ವಾರ ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಅದೇ ವೇಳೆ, ಈ ಘಟನೆಯಲ್ಲಿ ಸೌದಿ ಅರೇಬಿಯವು ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಮೂವರು ಸದಸ್ಯರನ್ನು ಬಂಧಿಸಿರುವುದಾಗಿ ಸೌದಿ ವಾರ್ತಾ ಸಚಿವಾಲಯ ಹೇಳಿತ್ತು.

‘‘ಮೀನುಗಾರರ ಬಳಿ ಶಸ್ತ್ರವಿರಲಿಲ್ಲ. ಸೌದಿ ಗಡಿ ಯೋಧರು ಅವರ ದೋಣಿಗಳ ಮೇಲೆ ಗುಂಡು ಹಾರಿಸಿ ಓರ್ವ ಮೀನುಗಾರನನ್ನು ಕೊಂದಿದ್ದಾರೆ’’ ಎಂದು ಇರಾನ್‌ನ ಆಂತರಿಕ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ‘ಫಾರ್ಸ್’ ವರದಿ ಮಾಡಿದೆ.

ಕಳೆದ ಶುಕ್ರವಾರ ವಶಪಡಿಸಿಕೊಳ್ಳಲಾದ ದೋಣಿಯು ಸ್ಫೋಟಕಗಳನ್ನು ಸಾಗಿಸುತ್ತಿತ್ತು ಹಾಗೂ ಬಂಧನಕ್ಕೊಳಗಾದವರು ಸೌದಿ ಜಲಪ್ರದೇಶದಲ್ಲಿ ‘ಭಯೋತ್ಪಾದಕ ಕೃತ್ಯ’ವೊಂದನ್ನು ನಡೆಸಲು ಉದ್ದೇಶಿಸಿದ್ದರು ಎಂದು ರಿಯಾದ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News