ಸುಕ್ಮಾ ನಕ್ಸಲ್ ದಾಳಿ ಪ್ರಕರಣ: ತನಿಖಾ ವರದಿ ಬಹಿರಂಗಕ್ಕೆ ಮನವಿ

Update: 2017-06-23 15:17 GMT

ಹೊಸದಿಲ್ಲಿ, ಜೂ.23: ಸುಕ್ಮಾದಲ್ಲಿ ಇತ್ತೀಚೆಗೆ ನಕ್ಸಲರ ದಾಳಿಯಿಂದ 25 ಸಿಆರ್‌ಪಿಎಫ್ ಸಿಬ್ಬಂದಿಗಳು ಹತರಾದ ಪ್ರಕರಣದಲ್ಲಿ ನಡೆಸಲಾದ ತನಿಖಾ ವರದಿ ಬಹಿರಂಗಗೊಳಿಸಬೇಕೆಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿದೆ.

  ಆದರೆ ಮನವಿಯನ್ನು ತಳ್ಳಿ ಹಾಕಿರುವ ಸಿಆರ್‌ಪಿಎಫ್, ಸುಕ್ಮಾದಲ್ಲಿ ಇತ್ತೀಚೆಗೆ ನಕ್ಸಲರ ದಾಳಿಯಿಂದ 25 ಸಿಆರ್‌ಪಿಎಫ್ ಸಿಬ್ಬಂದಿಗಳು ಹತರಾದ ಪ್ರಕರಣದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿಲ್ಲ ಎಂಬ ಹೇಳಿಕೆ ನೀಡಿದೆ.

   ಈ ಹೇಳಿಕೆ ಬಗ್ಗೆ ಟೀಕೆ ಕೇಳಿ ಬರುತ್ತಿರುವಂತೆಯೇ ಇದೀಗ ತಪ್ಪನ್ನು ಸರಿಪಡಿಸುವ ಪ್ರಯತ್ನ ನಡೆಸಿರುವ ಸಿಆರ್‌ಪಿಎಫ್, ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದ್ದು ಇದರಿಂದ ಸಿಆರ್‌ಪಿಎಫ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ ಎಂದು ತಿಳಿಸಿದೆ.

  ಸುಕ್ಮಾ ದಾಳಿ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸಬೇಕೆಂದು ಮಾನವ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸಿಆರ್‌ಪಿಎಫ್ ಈ ಹೇಳಿಕೆ ನೀಡಿದೆ.

 ಮೇಲ್ನೋಟಕ್ಕೆ ಕಂಡು ಬಂದಿರುವಂತೆ ಇದು ದಾಳಿಯಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಸಿಬ್ಬಂದಿಗಳ ಬದುಕುವ ಹಕ್ಕನ್ನು ಉಲ್ಲಂಘಿಸಿದ ಪ್ರಕರಣವಾಗಿದೆ . ಆದ್ದರಿಂದ ಆರ್‌ಟಿಐ ಕಾಯ್ದೆಯ 24ನೇ ಪರಿಚ್ಛೇದಡಿ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

 ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಹಿರಂಗಗೊಳಿಸುವುದರಿಂದ ಸಿಆರ್‌ಪಿಎಫ್‌ಗೆ ವಿನಾಯಿತಿ ನೀಡಲಾಗಿದೆ. ಆದರೆ ಪ್ರಕರಣ ಮಾನವ ಹಕ್ಕು ಉಲ್ಲಂಘನೆ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು ಆಗಿದ್ದಲ್ಲಿ ಆರ್‌ಟಿಐ ಕಾಯ್ದೆಯ 24(1) ಪರಿಚ್ಛೇದದಡಿ ಮಾಹಿತಿ ಬಹಿರಂಗಗೊಳಿಸಬಹುದು.

 ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗ ಪಡಿಸುವ ಮುನ್ನ ಸಿಆರ್‌ಪಿಎಫ್ ವಿಷಯವನ್ನು ಕೇಂದ್ರೀಯ ಮಾಹಿತಿ ಆಯೋಗದ ಗಮನಕ್ಕೆ ತರಬೇಕಾಗುತ್ತದೆ.

 ಈ ಪ್ರಕರಣದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿಲ್ಲ ಅಥವಾ ಭ್ರಷ್ಟಾಚಾರ ನಡೆದಿಲ್ಲ.ಅಲ್ಲದೆ, ನಿಮ್ಮ ಅರ್ಜಿಯಲ್ಲಿ ಆ ರೀತಿಯ ಯಾವುದೇ ಆರೋಪಗಳಿಲ್ಲ. ಆದ್ದರಿಂದ ಆರ್‌ಟಿಐ ಕಾಯ್ದೆಯಡಿ ಯಾವುದೇ ಮಾಹಿತಿಯನ್ನು ನಿಮಗೆ ಒದಗಿಸಲಾಗದು ಎಂದು ಸಿಆರ್‌ಪಿಎಫ್ ತಿಳಿಸಿತ್ತು.

ಈ ಉತ್ತರವು ತನ್ನನ್ನು ಪೇಚಿಗೆ ಸಿಕ್ಕಿಸಬಹುದು ಎಂದು ಅರಿತ ಸಿಆರ್‌ಪಿಎಫ್ ತಕ್ಷಣ ಮತ್ತೊಂದು ಹೇಳಿಕೆ ನೀಡಿ- ಆರ್‌ಟಿಐ ಉತ್ತರವನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News