ಕೊಹ್ಲಿ ಪಡೆಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ ಬ್ರಾವೊ ಸೋದರರು

Update: 2017-06-23 17:45 GMT

ಪೋರ್ಟ್ ಆಫ್ ಸ್ಪೇನ್, ಜೂ.23: ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ಭಾರತೀಯ ಕ್ರಿಕೆಟ್ ತಂಡವನ್ನು ಭೇಟಿಯಾದ ಡ್ವೆಯ್ನೆ ಹಾಗೂ ಡರೆನ್ ಬ್ರಾವೊ ಎಲ್ಲರನ್ನು ಅಚ್ಚರಿಗೊಳಿಸಿದರು.

ಬ್ರಾವೋ ಸಹೋದರರು ಭಾರತ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬ್ರಾವೊ ಸಹೋದರರು ಭಾರತದ ಮೂವರು ಆಟಗಾರರಾದ ಎಂಎಸ್ ಧೋನಿ, ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಮಾತನಾಡುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹಾಕಿದೆ.

ಬ್ರಾವೊ ಸಹೋದರರು ನಾಯಕ ವಿರಾಟ್ ಕೊಹ್ಲಿ ಸಹಿತ ಹಲವು ಸ್ಟಾರ್ ಆಟಗಾರರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಆಲ್‌ರೌಂಡರ್ ಡ್ವೇಯ್ನಾ ಬ್ರಾವೊ ಐಪಿಎಲ್‌ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ್ದರು. ಡೆಕ್ಕನ್ ಚಾರ್ಜರ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೂ ಬ್ರಾವೊ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News