×
Ad

7 ವರ್ಷಗಳ ಹಿಂದಿನ ಫೋಟೊಶಾಪ್ ಚಿತ್ರ ಬಳಸಿ "ಮತಾಂತರ"ದ ಎಕ್ಸ್ ಕ್ಲೂಸಿವ್ ಸುದ್ದಿ ನೀಡಿದ ಟೈಮ್ಸ್ ನೌ

Update: 2017-06-24 17:04 IST

ಹೊಸದಿಲ್ಲಿ, ಜೂ.24: ಏಳು ವರ್ಷಗಳ ಹಿಂದಿನ ಫೋಟೊಶಾಪ್ ಚಿತ್ರವೊಂದನ್ನಿಟ್ಟುಕೊಂಡು "ಟೈಮ್ಸ್ ನೌ" ಆಂಗ್ಲ ಸುದ್ದಿವಾಹಿನಿಯು ಪ್ರೈಮ್ ಟೈಮ್ ಕಥೆಯೊಂದನ್ನು ಹೊಸೆಯುತ್ತಿರುವುದನ್ನು ‘ಆಲ್ಟ್ ನ್ಯೂಸ್ ಡಾಟ್ ಇನ್’ (Altnews.in) ಬಯಲಿಗೆಳೆದಿದೆ. 

‘‘ಈ ಐಸಿಸ್ ಚಟುವಟಿಕೆಗಳ ಕೇಂದ್ರದಲ್ಲಿ ಯುವ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ. ಅಹಿತಕರವಾದುದು ಏನೂ ನಡೆಯುತ್ತಿಲ್ಲ ಎಂದು ಅವರು ಹೇಳಬಹುದು. ಖಿಲಾಫತ್‌ಗೆ ಬದ್ಧರಾಗಿರುವ ಏಜೆಂಟ್‌ಗಳು ಕೋಚಿಂಗ್ ಸೆಂಟರ್‌ಗಳಲ್ಲಿ ಮತ್ತು ಟ್ಯೂಷನ್ ಕ್ಲಾಸ್‌ಗಳಲ್ಲಿ ಯುವ ಹಿಂದೂಗಳ ಬ್ರೈನ್ ವಾಷ್ ಮಾಡುತ್ತಿದ್ದಾರೆ ಎನ್ನುವುದನ್ನು ನಾವು ದೃಢಪಡಿಸಬಹುದು. ನಿಮ್ಮ ಟಿವಿ ಸ್ಕ್ರೀನ್‌ಗಳ ಮೇಲೆ ಕಾಣುತ್ತಿರುವಂತಹ ನಿಗೂಢ ರೇಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಮತ್ತು ಇವೇ ಕಾರ್ಡ್‌ಗಳ ಮೂಲಕ ಆಮಿಷಗಳನ್ನೊಡ್ಡಲಾಗುತ್ತದೆ.

ಈ ರೇಟ್ ಕಾರ್ಡ್ ಏನು ಹೇಳುತ್ತಿದೆ ನೋಡಿ...ಅದು ನಿಮ್ಮ ಧರ್ಮ, ನಿಮ್ಮ ನಂಬಿಕೆಗಳಿಗೆ ಬೆಲೆ ಕಟ್ಟಿದೆ. ರೇಟ್ ಕಾರ್ಡ್‌ನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕುತೂಹಲ ಹುಟ್ಟಿಸುವಂತಹ ವಿವರಗಳನ್ನು ಕಾಣಬಹುದು’’: ಇದು ಅರ್ನಾಬ್ ಗೋಸ್ವಾಮಿ ಹೊರಬಿದ್ದ ನಂತರ ಟೈಮ್ಸ್ ನೌ ಟಿವಿಯ ಮುಖ್ಯ ಸಂಪಾದಕರಾಗಿರುವ ರಾಹುಲ ಶಿವಶಂಕರ್ ಊದಿದ್ದ ತುತ್ತೂರಿ. ಇದು ‘ಭಾರತದ ಗಾಝಾ’ ಕೇರಳದ ಕಾಸರಗೋಡಿನ ವರದಿ ಎಂದೂ ಅವರ ತುತ್ತೂರಿ ಹೇಳಿಕೊಂಡಿತ್ತು.

ಪ್ರತಿ ಧರ್ಮ, ಜಾತಿಗೆ ಹೇಗೆ ಬೆಲೆ ಕಟ್ಟಲಾಗಿದೆ ಎಂದು ಶಿವಶಂಕರ್ ಬಣ್ಣಿಸುತ್ತಿದ್ದರೆ ಟಿವಿ ಸ್ಕ್ರೀನ್ ವಿವಿಧ ಧರ್ಮಗಳು/ಜಾತಿಗಳು/ಪಂಗಡಗಳಿಗೆ ಸೇರಿದ ಮಹಿಳೆಯರಿಗೆ ನಿಗದಿಗೊಳಿಸಿದ ಒಂದು ಲ.ರೂ.ಗಳಿಂದ ಏಳು ಲ.ರೂ.ವರೆಗಿನ ವಿವಿಧ ದರಗಳನ್ನು ತೋರಿಸುತ್ತಿತ್ತು. ಹಿಂದು ಬ್ರಾಹ್ಮಣ ಹುಡುಗಿಗೆ 5 ಲ.ರೂ., ಸಿಖ್ ಪಂಜಾಬಿ ಹುಡುಗಿಗೆ 7ಲ.ರೂ., ಹಿಂದು ಕ್ಷತ್ರಿಯ ಹುಡುಗಿಗೆ 4.5 ಲ.ರೂ.,ಹಿಂದು ಒಬಿಸಿ/ಎಸ್‌ಸಿ/ಎಸ್‌ಟಿಗಳಿಗೆ 2 ಲ.ರೂ., ಬೌದ್ಧ ಹುಡುಗಿಗೆ 1.5 ಲ.ರೂ., ಜೈನ ಹುಡುಗಿಗೆ 3 ಲ.ರೂ.ಗಳನ್ನು ಖಿಲಾಫತ್ ನಿಗದಿಗೊಳಿಸಿದೆ ಎಂದು ಶಿವಶಂಕರ್ ಹೇಳುತ್ತಲೇ ಇದ್ದರು.

ಈ ಕಥೆಯ ವಿವಿಧ ಮಗ್ಗಲುಗಳನ್ನು ಟ್ವೀಟಿಸಲು ‘ಖಿಲಾಪತ್ ಕನ್ವರ್ಟ್ಸ್ ಹಿಂದೂಸ್’ಎಂಬ ಹ್ಯಾಷ್‌ಟ್ಯಾಗ್‌ನ್ನು ಟೈಮ್ಸ್ ನೌ ಬಳಸಿತ್ತು. ರೇಟ್ ಕಾರ್ಡ್ ಪೋಸ್ಟರ್‌ನಲ್ಲಿಯ ವಿವಿಧ ದರಗಳನ್ನು ಕೂಡ ಅದು ಟ್ವೀಟ್ ಮಾಡಿತ್ತು. ಟೈಮ್ಸ್ ನೌ ಪ್ರದರ್ಶಿಸಿದ ರೇಟ್ ಕಾರ್ಡ್ ಈಗ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಮತ್ತು ಅದನ್ನು ಇಲ್ಲಿ ನೋಡಬಹುದು.

ಇದೇ ಪೋಸ್ಟರ್‌ನ್ನು ಆಧರಿಸಿ ಅಹ್ಮದಾಬಾದ್ ಮಿರರ್ 2013, ಫೆಬ್ರವರಿಯಲ್ಲಿ ‘ಲವ್ ಜಿಹಾದ್ ಇನ್ ವಡೋದರಾ ಕಮ್ಸ್ ವಿಥ್ ಎ ಪ್ರೈಝ್ ಟ್ಯಾಗ್’ ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಪ್ರಕಟಿಸಿತ್ತು. ಝೀ ನ್ಯೂಸ್,ಒನ್ ಇಂಡಿಯಾ ಮತ್ತು ದೈನಿಕ ಭಾಸ್ಕರ್(ಮರಾಠಿ), ಇಂಡಿಯಾ ಡಾಟ್ ಕಾಮ್ ಮತ್ತು ಸಹಾರಾ ಸಮಯ್ ಮಿರರ್‌ನ ಈ ಕಥೆಯನ್ನು ಮರುವರದಿ ಮಾಡಿದ್ದವು. ರೇಟ್ ಕಾರ್ಡ್ ಚಿತ್ರದ ಬಗ್ಗೆ ಟೈಮ್ಸ್ ನೌ ಎಂದೂ ಶಂಕೆ ವ್ಯಕ್ತಪಡಿಸಿಲ್ಲವಾದರೂ, 2016 ಫೆಬ್ರವರಿಯಲ್ಲಿ ಈ ಕಥೆಯನ್ನು ಹರಿಯಬಿಟ್ಟಿದ್ದ ಹೆಚ್ಚಿನ ಮಾಧ್ಯಮ ಸಂಸ್ಥೆಗಳು ಜನರನ್ನು ಪ್ರಚೋದಿಸಲು ವಾಟ್ಸಾಪ್ ಫಾರ್ವರ್ಡ್‌ನ್ನು ವೈರಲ್ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದವು.

ಹಿಂದುತ್ವ ಡಾಟ್ ಇನ್ಫೋ, ಜಾಗರೂಕ್ ಭಾರತ್ ಮತ್ತು ಹಿಂದು ಎಕ್ಸಿಸ್ಟನ್ಸ್‌ನಂತಹ ಸುಳ್ಳು ಸುದ್ದಿಗಳ ತಾಣಗಳೂ 2016, ಫೆಬ್ರವರಿಯಲ್ಲಿ ಈ ಪೋಸ್ಟರ್‌ನ ಚಿತ್ರವನ್ನು ಪ್ರಸಾರ ಮಾಡಿದ್ದವು. ಈ ಕಪ್ಪು-ಬಿಳುಪು ಚಿತ್ರದ ಅತ್ಯಂತ ಹಳೆಯ ಆವೃತ್ತಿಯು 2014, ಸೆ.20ರಂದು ‘ಬೇರ್ ನೇಕೆಡ್ ಇಸ್ಲಾಂ’ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದ್ದ ಪೋಸ್ಟ್‌ನಲ್ಲಿ ಲಭ್ಯವಿದೆ. 2014ರಲ್ಲಿ ಈ ಪೋಸ್ಟರ್ ವೈರಲ್ ಆಗಿದ್ದಾಗ ಎಬಿಪಿ ನ್ಯೂಸ್, ವೆಬ್‌ಸೈಟ್‌ಗಳು ಮತ್ತು ಪೋಸ್ಟರ್‌ನಲ್ಲಿ ಕೆಳಗೆ ಸೂಚಿಸಿದ್ದ ವಿಳಾಸಗಳನ್ನು ವಿಶ್ಲೇಷಿಸಿ ಇದೊಂದು ನಕಲಿ ಪೋಸ್ಟರ್ ಎಂದು ಸ್ಪಷ್ಟಪಡಿಸಿತ್ತು. ಶಿವಸೇನೆಯ ಮುಖವಾಣಿ ‘ಸಾಮನಾ’2010ರಲ್ಲಿ ಈ ವರದಿಯನ್ನು ಪ್ರಕಟಿಸಿತ್ತು.

ಈ ಕಥೆಯ ಅತ್ಯಂತ ಹಳೆಯ ಆವೃತ್ತಿ 2010, ಫೆ.5ರಂದು ‘ಸಿಖ್ ಆ್ಯಂಡ್ ಇಸ್ಲಾಂ’ ಎಂಬ ಬ್ಲಾಗ್‌ನಲ್ಲಿ ಪ್ರಕಟಗೊಂಡಿತ್ತು. ಈ ಬ್ಲಾಗ್ ಟೈಮ್ಸ್ ನೌ ತೋರಿಸಿರುವ ಕಪ್ಪು-ಬಿಳುಪು ಚಿತ್ರದ ಮೂಲ ವರ್ಣ ಆವೃತ್ತಿಯನ್ನು ಪ್ರಕಟಿಸಿತ್ತು. ಇದು ಸಂಪೂರ್ಣ ಸುಳ್ಳು ಎನ್ನುವುದನ್ನು ಸಾಬೀತುಗೊಳಿಸುವ ಹಲವಾರು ಅಂಶಗಳು ಇಲ್ಲಿ ಎದ್ದು ಕಾಣುತ್ತವೆ. ಮೊದಲನೆಯದಾಗಿ ಪೋಸ್ಟರ್‌ನಲ್ಲಿ ‘ಇನ್ ದಿ ನೇಮ್ ಆಫ್ ಅಲ್ಲಾಹ್...ಮೋಸ್ಟ್ ಮರ್ಸಿಫುಲ್,ಮೋಸ್ಟ್ ಬೆನೆಫಿಷಿಯರಿ’ಎಂಬ ಬರಹವಿದೆ. ಆದರೆ ಅದನ್ನು ಸಾಮಾನ್ಯವಾಗಿ ‘ಇನ್ ದಿ ನೇಮ್ ಆಫ್ ಅಲ್ಲಾಹ್, ದಿ ಮೋಸ್ಟ್ ಬೆನೆಫಿಷಿಯಂಟ್, ದಿ ಮೋಸ್ಟ್ ಮರ್ಸಿಫುಲ್ ’ಎಂದು ಬರೆಯಲಾಗುತ್ತದೆ. ನಿಜಕ್ಕೂ ಇಸ್ಲಾಮಿಕ್ ಸಂಘಟನೆಯೊಂದು ಈ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದ್ದಿದ್ದರೆ ಇಂತಹ ತಪ್ಪು ನಡೆಯುತ್ತಿರಲೇ ಇಲ್ಲ. ಅಲ್ಲದೆ ಪೋಸ್ಟರ್‌ನ ಮೇಲ್ಗಡೆಯಿರುವ ಹೃದಯಾಕಾರದ ಚಿತ್ರವು ಇದೊಂದು ಫೋಟೊಶಾಪ್ ಮಾಡಲಾದ ಪೋಸ್ಟರ್ ಎನ್ನುವುದಕ್ಕೆ ಅತ್ಯಂತ ದೃಢವಾದ ಪುರಾವೆಯಾಗಿದೆ.

ಹೃದಯದೊಳಗಿನ ಗನ್‌ನಂತಹ ಚಿತ್ರವು ವಾಸ್ತವದಲ್ಲಿ ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ಉಗ್ರರ ಗುಂಪು ಹೆರ್ಬೊಲ್ಲಾದ ಧ್ವಜವಾಗಿದೆ. ಹೃದಯಾಕಾರದ ಚಿತ್ರವು 2006ರಿಂದ ಸ್ವತಂತ್ರವಾಗಿ ಚಲಾವಣೆಯಲ್ಲಿದೆ. ಇದು ಅಪಪ್ರಚಾರಕ್ಕಾಗಿ ಆ್ಯಡೋಬ್ ಫೊಟೊಶಾಪ್‌ನಂತಹ ಸಾಫ್ಟ್‌ವೇರ್ ಬಳಸಿ ಸೃಷ್ಟಿಸಿದ್ದ ಚಿತ್ರ ಮತ್ತು ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಈ ಎಲ್ಲ ಅಂಶಗಳು ಬೆಟ್ಟು ಮಾಡುತ್ತಿವೆ.

ಟೈಮ್ಸ್ ನೌ ಈಗ ಏಳು ವರ್ಷಗಳ ಹಿಂದಿನ, ಒಳಗಡೆ ಹೆರ್ಬೊಲ್ಲಾ ಧ್ವಜವಿರುವ ಇದೇ ಫೋಟೊಶಾಪ್ ಚಿತ್ರವನ್ನು ಮತ್ತು 2014 ಹಾಗೂ 2016ರಲ್ಲಿ ಭಾರತೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿದ್ದ ಅದೇ ವಾಟ್ಸಾಪ್ ವದಂತಿಯನ್ನು ಬಳಸಿಕೊಂಡಿದೆ ಮತ್ತು ಇದು ಕೇರಳದಲ್ಲಿ ಖಿಲಾಫತ್ ಇದೆ ಎನ್ನುವುದಕ್ಕೆ ಸಾಕ್ಷ ಎಂದು ಹೇಳಿಕೊಳ್ಳುತ್ತಿದೆ.

ಇದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಏನಾದರೂ ಇರಲು ಸಾಧ್ಯವೇ?. ಅರುಣ ಶೌರಿಯವರು ಈ ಚಾನೆಲ್‌ಗಳನ್ನು ಉತ್ತರ ಕೊರಿಯಾದ ಚಾನೆಲ್‌ಗಳೆಂದು ಬಣ್ಣಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News