"ನನ್ನ ಮಗನ ದೇಹಕ್ಕೆ ಈ ರೀತಿ ಇರಿಯುವಷ್ಟು ಅವರು ಕ್ರೂರರಾದುದು ಹೇಗೆ": ಜುನೈದ್ ತಂದೆ ಜಲಾಲುದ್ದೀನ್ ಪ್ರಶ್ನೆ
ಹೊಸದಿಲ್ಲಿ, ಜೂ. 24: "ಮೂರು ವರ್ಷಗಳ ಕಾಲ ಕಷ್ಟಪಟ್ಟು ಕುರ್ ಆನ್ ಕಂಠಪಾಠ ಮಾಡಿರುವುದಕ್ಕೆ ಬುಧವಾರ ಸಂಜೆ ಜುನೈದ್ ಹಾಗೂ ಹಾಸಿಮ್ "ಹಾಫಿಝ್" ಬಿರುದು ಪಡೆದುಕೊಂಡಿದ್ದರು. ಅದಕ್ಕಾಗಿ ಅವರು ತಾಯಿಯಿಂದ 1,500 ರೂ. ಬಹುಮಾನ ಪಡೆದಿದ್ದರು. ಹಾಫಿಝ್ ಬಿರುದು ಪಡೆದ ಬಳಿಕ ಅವರು ಆಚರಿಸುತ್ತಿರುವ ಮೊದಲ ಈದ್ ಇದು. ಈ ಹಿನ್ನೆಲೆಯಲ್ಲಿ ಈ ಬಾರಿ ಈದ್ ಅನ್ನು ಸಂಭ್ರಮದಿಂದ ಆಚರಿಸಬೇಕು, ದಿಲ್ಲಿ ಜಾಮಿಯಾ ಮಸೀದಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸಿದ್ದರು. ಖರೀದಿ ನಡೆಸಿ ಹೊತ್ತು ಕಂತುವ ಮುನ್ನ ಮನೆ ಸೇರುತ್ತೇವೆ ಎಂದು ಹೇಳಿದ್ದರು. ಆದರೆ, ಇಬ್ಬರಲ್ಲಿ ಓರ್ವ ಬರಲೇ ಇಲ್ಲ".
"ಮಥುರಾಕ್ಕೆ ತೆರಳುತ್ತಿರುವ ರೈಲಿನಲ್ಲಿ ಆಸನ ಕುರಿತು ನಡೆದ ವಿವಾದ ಬೀಫ್ ವಿಚಾರಕ್ಕೆ ತಿರುಗಿದ ಪರಿಣಾಮ ಜುನೈದ್ ಪ್ರಯಾಣಿಕರ ಗುಂಪೊಂದರಿಂದ ಹತ್ಯೆಗೀಡಾದರು. ಇತರ ನಾಲ್ವರು ಹಲ್ಲೆಗೀಡಾದರು. ಈ ಘಟನೆ ಇಲ್ಲಿಂದ 60 ಕಿ.ಮೀ ದೂರದಲ್ಲಿರುವ ಹರ್ಯಾಣದ ಓಕ್ಲಾ ಹಾಗೂ ಅಸೋಟಿ ನಡುವೆ ಗುರುವಾರ ನಡೆದಿದೆ. ದಾಳಿಕೋರರರು ನಮ್ಮನ್ನು "ಪದೇಪದೇ ದೇಶ ವಿರೋಧಿಗಳು", "ಬೀಫ್ ತಿನ್ನುವವರು" ಎಂದು ಅವಮಾನ ಮಾಡಿದರು. ನಮ್ಮ ಟೋಪಿ ಸೆಳೆದು ಕೆಳಗೆ ಎಸೆದರು. ನಮ್ಮ ಗಡ್ಡ ಎಳೆದು ಮುಲ್ಲಾ ಎಂದು ಕರೆದು ಅವಮಾನಿಸಿದರು ಎಂದು ಹರ್ಯಾಣದ ಫರೀದಾಬಾದ್‌ನ ಪುಟ್ಟ ಗ್ರಾಮ ಖಡ್ಡಾವ್ಲಿಯ ನಿವಾಸಿಗಳಾದ ಈ ನಾಲ್ವರು ಹೇಳಿದ್ದಾರೆ.
ಕುರ್ ಆನ್ ಕಂಠಪಾಠ ಮಾಡಿರುವುದಕ್ಕೆ ಈದ್ ಸಮಾರಂಭದಲ್ಲಿ ಸಮ್ಮಾನ ನೆರವೇರಲಿರುವ ಹಿನ್ನೆಲೆಯಲ್ಲಿ ಜುನೈದ್ ಸಂತಸಗೊಂಡಿದ್ದರು. ರಮಝಾನ್ ಮಾಸ ಆರಂಭವಾದ ಬಳಿಕ ಜುನೈದ್ ಹಾಗೂ ಹಾಸಿಮ್ ಪ್ರತಿದಿನ ಮಸೀದಿಯಲ್ಲಿ ಕುರ್ ಆನ್ ಪಠಿಸುತ್ತಿದ್ದರು. ಜುಮಾ ಮಸೀದಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಹೊಸಬಟ್ಟೆಗಳನ್ನು ಖರೀದಿಸಿದ್ದರು. ಹಬ್ಬದ ಸಂದರ್ಭ ಬಡಿಸಲು ಸಿಹಿತಿಂಡಿ ಹಾಗೂ ಸೇವಿಗೆ ತರುವಂತೆ ತಾಯಿ ತಿಳಿಸಿದ್ದರು. ಬೇಗನೇ ಮನೆಗೆ ಹಿಂದಿರುಗುವುದಾಗಿ ಅವರು ಹೇಳಿದ್ದರು. ಆದರೆ, ಜುನೈದ್ ಮೃತದೇಹ ಮನೆಗೆ ಹಿಂದಿರುಗಿದೆ. "ನನ್ನ ಮಗನ ದೇಹಕ್ಕೆ ಈ ರೀತಿ ಇರಿಯುವಷ್ಟು ಅವರು ಕ್ರೂರರಾದುದು ಹೇಗೆ" ಎಂದು ಜುನೈದ್‌ನ ತಂದೆ ಜಲಾಲುದ್ದೀನ್ ಪ್ರಶ್ನಿಸಿದ್ದಾರೆ. ಅವನು ಮಗು. ಅವನಿಗೆ ಈಗ 16 ವರ್ಷ, ಈ ರೀತಿ ಕ್ರೂರವಾಗಿ ಕೊಲ್ಲುವಷ್ಟು ಅವರು ನಮ್ಮನ್ನು ಯಾಕೆ ದ್ವೇಷಿಸುತ್ತಾರೆ ? ನಾನು ರೈಲು ನಿಲ್ದಾಣ ತಲುಪಿದಾಗ ನನ್ನ ಮಗ ಹಾಸಿಮ್ ನಿಲ್ದಾಣದಲ್ಲಿ ಕುಳಿತಿದ್ದ. ಅವನ ಮಡಿಲಲ್ಲಿದ್ದ ಜುನೈದ್‌ನ ಮೃತದೇಹ ರಕ್ತದಿಂದ ತೊಯ್ದಿತ್ತು ಎಂದು ಜಲಾಲುದ್ದೀನ್ ಹೇಳಿದ್ದಾರೆ.