ಲಂಡನ್: 800 ಫ್ಲಾಟ್‌ಗಳ ನಿವಾಸಿಗಳ ತುರ್ತು ತೆರವು; ತಪಾಸಣೆ ಬಳಿಕ ನಾಟಕೀಯ ನಿರ್ಧಾರ
ಲಂಡನ್, ಜೂ. 24: ಬೆಂಕಿ ಅಪಾಯದ ಹಿನ್ನೆಲೆಯಲ್ಲಿ ಲಂಡನ್‌ನ 800 ಫ್ಲಾಟ್‌ಗಳ ನಿವಾಸಿಗಳನ್ನು ಶನಿವಾರ ತುರ್ತಾಗಿ ತೆರವುಗೊಳಿಸಲಾಯಿತು. ಈ ಫ್ಲಾಟ್‌ಗಳ ಕಟ್ಟಡಗಳು ಹೊರ ಹೊದಿಕೆಯು ಬೆಂಕಿ ಹರಡಲು ಕಾರಣವಾಗುತ್ತದೆ ಎಂದು ಭೀತಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಯಿತು.
ಇತ್ತೀಚೆಗೆ ಲಂಡನ್‌ನ ಗ್ರೆನ್‌ಫೆಲ್ ಟವರ್ಸ್‌ನಲ್ಲಿ ಕಾಣಿಸಿಕೊಂಡ ಭೀಕರ ಬೆಂಕಿ ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟಡಗಳ ಭದ್ರತಾ ವಿಶ್ಲೇಷಣೆ ನಡೆಸಿ ಈ ಕ್ರಮ ತೆಗೆದುಕೊಂಡಿದ್ದಾರೆ.
ಐದು ‘ಚಾಲ್ಕೋಟ್ಸ್ ಎಸ್ಟೇಟ್’ ಕಟ್ಟಡಗಳ ಹೊರ ಹೊದಿಕೆ (ಕ್ಲಾಡಿಂಗ್)ಯು ಇತ್ತೀಚೆಗೆ ಸುಟ್ಟುಹೋದ ಕಟ್ಟಡದದ ಹೊರ ಹೊದಿಕೆಯನ್ನು ಹೋಲುತ್ತಿರುವುದೇ ನಿವಾಸಿಗಳ ಸ್ಥಳಾಂತರಕ್ಕೆ ಕಾರಣವಾಗಿದೆ.
ಗ್ರೆನ್‌ಫೆಲ್ ಕಟ್ಟಡದ ದಹನಶೀಲ ಹೊರ ಹೊದಿಕೆಯಿಂದಾಗಿ ಬೆಂಕಿ ವೇಗವಾಗಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು ಎಂದು ಭಾವಿಸಲಾಗಿದೆ.
ಕಳೆದ ವಾರ ನಡೆದ ಗ್ರೆನ್‌ಫೆಲ್ ಟವರ್ಸ್ ದುರಂತದಲ್ಲಿ 79 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಕಟ್ಟಡಗಳ ಹೊರಹೊದಿಕೆಯನ್ನು ಗ್ರೆನ್‌ಫೆಲ್ ಕಟ್ಟಡದ ಹೊರ ಹೊದಿಕೆಯನ್ನು ಹಾಕಿದ್ದ ಗುತ್ತಿಗೆದಾರನೇ ಹಾಕಿದ್ದನು. ಹಾಗಾಗಿ, ಈ ಕಟ್ಟಡಗಳ ತುರ್ತು ತಪಾಸಣೆ ನಡೆಸಿದ ಬಳಿಕ ಈ ನಾಟಕೀಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಐದು ಕಟ್ಟಡಗಳ ನಿವಾಸಿಗಳನ್ನು ನಗರದಾದ್ಯಂತ ಇರುವ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ.