"ನಾನು ಕುಡಿದಿದ್ದೆ, ಗೋಮಾಂಸ ಭಕ್ಷಕರೆಂದು ಬಾಲಕರಿಗೆ ಹಲ್ಲೆ ನಡೆಸಲು ಸ್ನೇಹಿತರು ಸೂಚಿಸಿದ್ದರು"
ಹೊಸದಿಲ್ಲಿ, ಜೂ.24: ‘‘ನಾನು ಮದ್ಯ ಸೇವಿಸಿದ್ದೆ, ಅವರು ಗೋಮಾಂಸ ಭಕ್ಷಕರಾಗಿರುವುದರಿಂದ ಅವರ ಮೇಲೆ ಹಲ್ಲೆ ನಡೆಸುವಂತೆ ನನ್ನ ಸ್ನೇಹಿತರು ನನಗೆ ಹೇಳಿದ್ದರು’’ ಇದು ದಿಲ್ಲಿ-ಮಥುರಾ ರೈಲಿನಲ್ಲಿ 16ರ ಹರೆಯದ ಮುಸ್ಲಿಂ ಬಾಲಕನನ್ನು ಕೊಂದು, ಆತನ ಮೂವರು ಸೋದರರನ್ನು ಗಾಯಗೊಳಿಸಿರುವ ಬಂಧಿತ ಆರೋಪಿಯು ಪೊಲೀಸರಿಗೆ ನೀಡಿರುವ ಹೇಳಿಕೆ.
ಮಥುರಾಗೆ ತೆರಳುತ್ತಿದ್ದ ರೈಲಿನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆಂಬ ಆರೋಪದಲ್ಲಿ ದುಷ್ಕರ್ಮಿಗಳು ಜುನೈದ್ ನನ್ನು ಕೊಲೆಗೈದು ಇತರರ ಮೇಲೆ ಹಲ್ಲೆ ನಡೆಸಿದ್ದರು. ಜುನೈದ್ ಮತ್ತಾತನ ಸಂಬಂಧಿಗಳಾದ ಹಾಶಿಂ ಹಾಗೂ ಶಾಖಿರ್ ದಿಲ್ಲಿಯ ಸದರ್ ಬಝಾರ್ ಪ್ರದೇಶದಲ್ಲಿ ಈದ್ ಗಾಗಿ ಶಾಪಿಂಗ್ ಮುಗಿಸಿ ಹರ್ಯಾಣದ ಬಲ್ಲಭ್‌ಘರ್ ನಲ್ಲಿರುವ ತಮ್ಮ ಮನೆಗೆ ಹಿಂದಿರುಗಲು ಗಾಝಿಯಾಬಾದ್-ದಿಲ್ಲ-ಮಥುರಾ ರೈಲನ್ನು ಹತ್ತಿದ್ದರು. ದುಷ್ಕರ್ಮಿಗಳ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಜುನೈದ್ ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
"ಆರೋಪಿಯು ಗುರುವಾರ ಸಂಜೆ ಇಲ್ಲಿಯ ಸದರ್ ಬಝಾರ್‌ನಲ್ಲಿ ರಮಝಾನ್ ಖರೀದಿ ಮುಗಿಸಿಕೊಂಡು ಸ್ವಗ್ರಾಮ ಹರ್ಯಾಣದ ವಲ್ಲಭಗಡಕ್ಕೆ ಮರಳುತ್ತಿದ್ದ ನಾಲ್ವರು ಸೋದರರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಗುಂಪಿನ ಸದಸ್ಯ. ಆರೋಪಿಯ ಹೆಸರನ್ನು ಸದ್ಯಕ್ಕೆ ಬಹಿರಂಗಗೊಳಿಸುವಂತಿಲ್ಲ. ಇತರ ಮೂವರು ಆರೋಪಿಗಳಿಗಾಗಿ ನಾವು ಹುಡುಕುತ್ತಿದ್ದೇವೆ ಎಂದು ಸರಕಾರಿ ರೈಲ್ವೆ ಎಸ್‌ಪಿ ಕಮಲದೀಪ್ ಗೋಯಲ್ ತಿಳಿಸಿದರು.