ಮೀರಾಕುಮಾರ್ ವಿರುದ್ಧ ಸುಶ್ಮಾ ಸ್ವರಾಜ್ ವಾಗ್ದಾಳಿ

Update: 2017-06-25 12:39 GMT

ಹೊಸದಿಲ್ಲಿ, ಜೂ.25: ಯುಪಿಎನ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ತಾನು ಪ್ರತಿಪಕ್ಷ ನಾಯಕಿಯಾಗಿದ್ದಾಗ ಸ್ಪೀಕರ್ ಆಗಿದ್ದ ಮೀರಾಕುಮಾರ್ ಲೋಕಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ. ಸ್ಪೀಕರ್ ಮೀರಾ ಕುಮಾರ್ ಲೋಕಸಭೆಯಲ್ಲಿ ತನ್ನ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ವಿಡಿಯೋವನ್ನು ಸುಶ್ಮಾ ಪೋಸ್ಟ್ ಮಾಡಿದ್ದಾರೆ.

ತಾನು ಪೋಸ್ಟ್ ಮಾಡಿರುವಂತಹ ವಿಡಿಯೋ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಪ್ರತಿಪಕ್ಷ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂದು ತೋರಿಸುತ್ತದೆ ಎಂದಿರುವ ಸುಶ್ಮಾ ಅವರು ಮೀರಾಕುಮಾರ್ ಅವರ ತಟಸ್ಥ ನೀತಿಯನ್ನು ಪ್ರಶ್ನಿಸಿದ್ದಾರೆ.

ಸ್ಪೀಕರ್ ಅವರು ಸುಶ್ಮಾ ಅವರ ಆರು ನಿಮಿಷಗಳ ಭಾಷಣಕ್ಕೆ 60 ಬಾರಿ ಅಡ್ಡಿಪಡಿಸಿದ್ದಾರೆ ಎಂಬ ದಿನಪತ್ರಿಕೆಯ ಸುದ್ದಿಯನ್ನು ಸುಶ್ಮಾ ಟ್ವಿಟರ್‌ನಲ್ಲಿ ಲಿಂಕ್ ಮಾಡಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಭಾರತ ಸ್ವಾತಂತ್ರ ಪಡೆದ ಬಳಿಕ ಬಂದಂತಹ ಅತ್ಯಂತ ಭ್ರಷ್ಟ ಸರಕಾರವಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿಯಾಗಿದ್ದ ಸುಶ್ಮಾ ವಾಗ್ದಾಳಿ ನಡೆಸಿದ್ದರು. ಸುಶ್ಮಾ ಯುಪಿಎ ಸರಕಾರವನ್ನು ಟೀಕಿಸುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ಅವರು ಥ್ಯಾಂಕ್ಯೂ ಹಾಗೂ ಆಲ್ ರೈಟ್ ಎಂದು ಪದೇ ಪದೇ ಹೇಳುತ್ತಾ ಅವರ ಭಾಷಣಕ್ಕೆ ಅಡ್ಡಿಪಡಿಸುತ್ತಿರುವುದು ವಿಡಿಯೋದಲ್ಲಿದೆ.

ಬಿಹಾರದ ದಲಿತ ನಾಯಕಿ ಮೀರಾ ಕುಮಾರ್ ಎನ್‌ಡಿಎ ಅಭ್ಯರ್ಥಿ ದಲಿತ ನಾಯಕ ರಾಮನಾಥ್ ಕೋವಿಂದ ವಿರುದ್ಧ ರಾಷ್ಟ್ರಪತಿ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೀರಾ ಕುಮಾರ್ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News