ರಾಜಧಾನಿ, ಶತಾಬ್ದಿ ರೈಲುಗಳ ಸೇವೆಯಲ್ಲಿ ಬದಲಾವಣೆಗೆ ಸ್ವರ್ಣ ಯೋಜನೆ ಜಾರಿ

Update: 2017-06-26 09:19 GMT

ಹೊಸದಿಲ್ಲಿ, ಜೂ.26: ಮೂರು ತಿಂಗಳ ಸ್ವರ್ಣ(ಗೋಲ್ಡ್)ಯೋಜನೆಯಡಿಯಲ್ಲಿ ಭಾರತೀಯ ರೈಲ್ವೇಸ್ ಈ ವರ್ಷದ ಅಕ್ಟೋಬರ್‌ನಲ್ಲಿ ರಾಜಧಾನಿ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಸೇವೆಯಲ್ಲಿ ಗಮನಾರ್ಹ ಬದಲಾವಣೆಗೆ ನಿರ್ಧರಿಸಿದೆ.

ಟ್ರ್ಯಾಲಿಯನ್ನು ಬಳಸಿ ಆಹಾರ ವಿತರಣೆ, ಸಮವಸ್ತ್ರ ಧರಿಸಿದ ಸಭ್ಯ ಸಿಬ್ಬಂದಿ ಹಾಗೂ ರೈಲಿನಲ್ಲಿ ಪ್ರಯಾಣಿಕರಿಗೆ ಮನರಂಜನಾ ಪ್ಯಾಕೇಜ್ ಒದಗಿಸಲು ರೈಲ್ವೇಸ್ ಯೋಜನೆ ಹಾಕಿಕೊಂಡಿದೆ.

 ಈ ಎರಡು ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಗುರಿ ಹಾಕಿಕೊಂಡಿರುವ ಇಂಡಿಯನ್ ರೈಲ್ವೇಸ್ ಸುಮಾರು 25 ಕೋ.ರೂ. ವೆಚ್ಚದಲ್ಲಿ ತಲಾ 15 ರಾಜಧಾನಿ ಹಾಗೂ ಶತಾಬ್ದಿ ರೈಲುಗಳು ಸಹಿತ ಒಟ್ಟು 30 ರೈಲುಗಳಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.

ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಹಬ್ಬಗಳ ಋತುವಿಗೆ ಮೊದಲು ಮೂರು ತಿಂಗಳ ಸ್ವರ್ಣ ಯೋಜನೆಯಡಿಯಲ್ಲಿ ಬೋಗಿಗಳ ಒಳಾಂಗಣ ನವೀಕರಣ, ಶೌಚಗೃಹಗಳ ಸುಧಾರಣೆ ಹಾಗೂ ಕೋಚ್‌ಗಳಲ್ಲಿ ಸ್ವಚ್ಛತೆ ತರಲು ನಿರ್ಧರಿಸಿದೆ.

ರೈಲ್ವೇಸ್‌ನ ಕೆಟರಿಂಗ್, ಸಮಯಪಾಲನೆ, ಶೌಚಗೃಹದ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ನೀಡುವ ಬಟ್ಟೆಗಳ ಗುಣಮಟ್ಟದ ಬಗ್ಗೆ ಹೆಚ್ಚು ದೂರುಗಳು ಕೇಳಿಬರುತ್ತಿವೆ.

ದೇಶದ ಈಎರಡು ಪ್ರಮುಖ ರೈಲುಗಳ ಸೇವೆಯಲ್ಲಿ ಗಮನಾರ್ಹ ಬದಲಾವಣೆಗೆ ನಿರ್ಧರಿಸಲಾಗಿದ್ದು, ಸ್ವರ್ಣ ಯೋಜನೆಯಡಿಯಲ್ಲಿ ಮೂರು ತಿಂಗಳ ಗಡುವು ವಿಧಿಸಲಾಗಿದೆ ಎಂದು ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಆರ್‌ಪಿಎಫ್‌ನಿಂದ ಹೆಚ್ಚುವರಿ ಬೆಂಗಾವಲು ಸಿಬ್ಬಂದಿಗಳನ್ನು ನೇಮಕದ ಮೂಲಕ ರೈಲುಗಳಲ್ಲಿ ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸುವುದು ಯೋಜನೆಯಲ್ಲಿದೆ.

ಮುಂಬೈ, ಹೌರಾ, ಪಾಟ್ನಾ, ರಾಂಚಿ ಹಾಗೂ ಭುವನೇಶ್ವರ ಸಹಿತ 15 ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಮೇಲ್ದರ್ಜೆಗೇರಿಸಲು ಆಯ್ದುಕೊಳ್ಳಲಾಗಿದೆ.

ಹೌರಾ-ಪುರಿ, ಹೊಸದಿಲ್ಲಿ-ಚಂಡೀಗಡ, ಹೊಸದಿಲ್ಲಿ-ಕಾನ್ಪುರ, ಹೌರಾ-ರಾಂಚಿ, ಆನಂದ್ ವಿಹಾರ್-ಕಥ್‌ಗೊಡಮ್ ಸಹಿತ 15 ಶತಾಬ್ದಿ ರೈಲುಗಳಲ್ಲಿ ಬದಲಾವಣೆ ತರಲು ಆಯ್ಕೆ ಮಾಡಲಾಗಿದೆ.

ನೈರ್ಮಲ್ಯ ಕಾಪಾಡುವಂತೆ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಟ್ರಾಲಿಗಳನ್ನು ಬಳಸಿ ಆಹಾರ ವಿತರಿಸುವುದು ಬದಲಾವಣೆಯ ಪ್ರಮುಖ ಅಂಶವಾಗಿದೆ, ಮನರಂಜನಾ ಪ್ಯಾಕೇಜ್‌ನಡಿ ಪ್ರಯಾಣಿಕರಿಗೆ ಸಿನಿಮಾ, ಧಾರಾವಾಹಿ ಹಾಗೂ ಸಂಗೀತ ಸಹಿತ ಇತರ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News