ಒಂದೇ ವಾರದಲ್ಲಿ ಕೊಚ್ಚಿ ಮೆಟ್ರೋದ ಕೆಲಸ ಬಿಟ್ಟ 8 ತೃತೀಯಲಿಂಗಿಗಳು !

Update: 2017-06-26 11:23 GMT

ತಿರುವನಂತಪುರಂ,ಜೂ.26 : ಕೊಚ್ಚಿ ಮೆಟ್ರೋ ಯೋಜನೆಯನ್ನು ಇತ್ತೀಚೆಗೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಭಾಗವಾಗಿರುವ ತೃತೀಯ ಲಿಂಗಿಗಳ ಮೇಲೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದರು. ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿರುವುದು ಒಂದು ಕ್ರಾಂತಿಕಾರಕ ಕ್ರಮವೆಂದು ಹಲವರು ಅಭಿಪ್ರಾಯ ಪಟ್ಟಿದ್ದರು.

ಆದರೆ ಕೇವಲ ಒಂದೇ ವಾರದ ಅವಧಿಯಲ್ಲಿ ಮೆಟ್ರೋ ಯೋಜನೆಯ ಒಟ್ಟು 21 ತೃತೀಯಲಿಂಗಿ ಉದ್ಯೋಗಿಗಳಲ್ಲಿ ಎಂಟು ಮಂದಿ ತಮ್ಮ ಉದ್ಯೊಗ ತೊರೆದಿದ್ದಾರೆ. ಕಾರಣ-ಯಾರು ಕೂಡಾ ಅವರಿಗೆ ಮನೆ ಯಾ ಕೊಠಡಿಗಳನ್ನು ಬಾಡಿಗೆಗೆ ನೀಡಲು ಸಿದ್ಧರಿಲ್ಲ. ಈ ಬಗ್ಗೆ ಅವರು ಕೊಚ್ಚಿ ಮೇಯರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಮನವಿಗಳನ್ನು ಮಾಡಿದರೂ ಸ್ಪಂದನೆ ದೊರೆಯದೇ ಇದ್ದಾಗ ಅನಿವಾರ್ಯವಾಗಿ ಕೆಲಸ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಎಡಪಳ್ಳಿ ಸ್ಟೇಶನ್ನಿನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ರೂ .15,000 ಸಂಪಾದಿಸುವ ರಾಗ ರಂಜಿನಿ ಸ್ನಾತ್ತಕೋತ್ತರ ಪದವೀಧರೆ. ಸದ್ಯ ಈಕೆ ದಿನಕ್ಕೆ ರೂ. 600 ಬಾಡಿಗೆ ಪಾವತಿಸಿ ಲಾಡ್ಜ್ ಒಂದರಲ್ಲಿ ವಾಸವಾಗಿದ್ದಾರೆ. ಎಷ್ಟು ದಿನ ಹೀಗೆ ಮುಂದುವರಿಯಬಹುದು ಎಂದು ಅವರು ಪ್ರಶ್ನಿಸುತ್ತಾರೆ.

ತೃಪ್ತಿ ಎಂಬ ಹೆಸರಿನ ಇನ್ನೊಬ್ಬ ತೃತೀಯ ಲಿಂಗಿಗೆ ಹೌಸ್ ಕೀಪಿಂಗ್ ಹುದ್ದೆ ನೀಡಲಾಗಿತ್ತು. ನಗರದ ಹೊರವಲಯದಲ್ಲಿ ಒಂದು ಕೊಠಡಿಯ ಮನೆಯಲ್ಲಿ ವಾಸವಾಗಿರುವ ಆಕೆ ಪ್ರತಿ ದಿನ ಅಲ್ಲಿಂದ ಕೆಲಸದ ಸ್ಥಳಕ್ಕೆ ಬರುವುದು ತ್ರಾಸದಾಯಕವೆಂದು ಕೆಲಸ ಬಿಟ್ಟಿದ್ದಾರೆ.

ಪ್ರಥಮ ಹಂತದಲ್ಲಿ 23 ತೃತೀಯ ಲಿಂಗಿಗಳಿಗೆ ನೌಕರಿ ಆಫರ್ ಮಾಡಲಾಗಿದ್ದರೆ ಅದರಲ್ಲಿ 21 ಮಂದಿ ನೌಕರಿ ಒಪ್ಪಿಕೊಂಡಿದ್ದರು. ಎರಡನೇ ಹಂತದಲ್ಲಿ 20 ತೃತೀಯ ಲಿಂಗಿ ಉದ್ಯೋಗಿಗಳನ್ನು ಸೇರಿಸಿಕೊಳ್ಳುವ ಉದ್ದೇಶವಿದೆಯೆನ್ನಲಾಗಿದೆ.

ಆದರೆ ತೃತೀಯ ಲಿಂಗಿಗಳು ಉದ್ಯೋಗ ತೊರೆಯುತ್ತಿರುವ ಬಗ್ಗೆ ಕೊಚ್ಚಿ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕೊಚ್ಚಿ ಮೇಯರ್ ಸೌಮಿನಿ ಜೈನ್ ತನಗೆ ಈ ಸಮಸ್ಯೆಯ ಬಗ್ಗೆ ಇಲ್ಲಿಯ ತನಕ ತಿಳಿಯದೇ ಇದ್ದರೂ ಸದ್ಯದಲ್ಲಿಯೇ ಮೆಟ್ರೋ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News