ಕಾಶ್ಮೀರ: ಈದ್ ವೇಳೆ ಘರ್ಷಣೆ; ಪೊಲೀಸರಿಂದ ಅಶ್ರುವಾಯು ಪ್ರಯೋಗ

Update: 2017-06-26 12:20 GMT

ಶ್ರೀನಗರ,ಜೂ.26: ಸೋಮವಾರ ಬೆಳಗ್ಗೆ ಕಣಿವೆಯಾದ್ಯಂತ ಈದ್ ಪ್ರಾರ್ಥನೆಯ ಬಳಿಕ ದಕ್ಷಿಣ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ನಡೆದ ಘರ್ಷಣೆಗಳಲ್ಲಿ ಡಝನ್‌ಗೂ ಅಧಿಕ ಜನರು ಗಾಯಗೊಂಡಿದ್ದಾರೆ.

ಬಾರಾಮುಲ್ಲಾ ಜಿಲ್ಲೆ, ಅನಂತ ನಾಗ್ ಮತ್ತು ಶೋಪಿಯಾನ ಜಿಲ್ಲೆಗಳ ಹಲವೆಡೆಗಳಲ್ಲಿ ಹಾಗೂ ಇಲ್ಲಿಯ ಹಳೆಯ ನಗರದಲ್ಲಿ ಹಲವಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಈ ವರ್ಷದ ರಮಝಾನ್ ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ರಕ್ತಪಾತಕ್ಕೆ ಸಾಕ್ಷಿಯಾಗಿದ್ದು, ರಮಝಾನ್ ಆರಂಭಗೊಂಡ ಮೇ 28ರಿಂದೀಚಿಗೆ ಯೋಧರು, ಪೊಲೀಸರು, ನಾಗರಿಕರು ಮತ್ತು ಉಗ್ರರು ಸೇರಿದಂತೆ 43 ಜನರು ಕೊಲ್ಲಲ್ಪಟ್ಟಿದ್ದಾರೆ. ಇವುಗಳ ಪೈಕಿ ಅತ್ಯಂತ ಘೋರವಾಗಿದ್ದು ಡಿಎಸ್‌ಪಿ ಮುಹಮ್ಮದ್ ಅಯ್ಯೂಬ್ ಪಂಡಿತ್ ಅವರ ಹತ್ಯೆ. ರಮಝಾನ್ ತಿಂಗಳ ಅತ್ಯಂತ ಪವಿತ್ರ ರಾತ್ರಿಯಂದು ಶ್ರೀನಗರದ ಜಾಮಿಯಾ ಮಸೀದಿಯ ಹೊರಗೆ ಉದ್ರಿಕ್ತ ಗುಂಪೊಂದು ಪಂಡಿತ್ ಅವರ ಬಟ್ಟೆಗಳನ್ನು ಕಿತ್ತೆಸೆದು ಥಳಿಸಿ ಬರ್ಬರವಾಗಿ ಹತ್ಯೆಗೈದಿತ್ತು.

ಪಂಡಿತ್ ಹತ್ಯೆ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಈದ್ ಪ್ರಾರ್ಥನೆಗಳಿಂದ ದೂರವಿರುವಂತೆ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿಗೆ ಸೂಚಿಸಿತ್ತು. ಜಿಲ್ಲಾ ಪೊಲೀಸ್ ಲೈನ್ಸ್‌ನಲ್ಲಿರುವ ಅಥವಾ ಸಂರಕ್ಷಿತ ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸುವಂತೆ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಲಾಗಿತ್ತು.

ಈದ್ ಪ್ರಾರ್ಥನೆಗಳು ಶಾಂತಿಪೂರ್ಣವಾಗಿ ಮುಗಿದಿವೆ ಎಂದು ತಿಳಿಸಿದ ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು, ಪ್ರಾರ್ಥನೆಗಳ ಬಳಿಕ ಘರ್ಷಣೆಗಳು ನಡೆದಿರುವುದನ್ನು ನಿರಾಕರಿಸಿದ್ದಾರೆ. ಸದ್ಯಕ್ಕೆ ತಮಗೆ ಅಂತಹ ಯಾವುದೇ ವರದಿ ಬಂದಿಲ್ಲ ಎಂದಿದ್ದಾರೆ.
ಸೋಪೋರ್‌ನಲ್ಲಿ ಪ್ರತಿಭಟನಕಾರರು ಈದ್ಗಾದಿಂದ ಮುಖ್ಯ ಮಾರುಕಟ್ಟೆ ಪ್ರದೇಶಕ್ಕೆ ಜಾಥಾ ಹೊರಡಿಸಲು ಪ್ರಯತ್ನಿಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ನಂತರ ಘರ್ಷಣೆಗಳು ಭುಗಿಲೆದ್ದವು.

ಮುಖ್ಯ ಚೌಕದತ್ತ ಕೆಲವರು ಕಲ್ಲುತೂರಾಟ ನಡೆಸಿದ ಬಳಿಕ ತಾವು ಅಶ್ರುವಾಯು ಪ್ರಯೋಗಿಸಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ.
ದ.ಕಾಶ್ಮೀರದ ಅನಂತನಾಗ್, ಶೋಪಿಯಾನ್, ಕುಲ್ಗಾಂ ಮತ್ತು ಫುಲ್ವಾಮಾ ಜಿಲ್ಲೆಗಳ ಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಈ ಜಿಲ್ಲೆಗಳ ಹಲವೆಡೆಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News