ಮಾನನಷ್ಟ ಮೊಕದ್ದಮೆ ಪ್ರಕರಣ: ಮೇಧಾ ವಿರುದ್ಧದ ಜಾಮೀನುರಹಿತ ವಾರಂಟ್ ರದ್ದು

Update: 2017-06-26 12:32 GMT

ಹೊಸದಿಲ್ಲಿ, ಜೂ.26: ನರ್ಮದಾ ಬಚಾವೋ ಆಂದೋಲದ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತು ಕೆವಿಐಸಿ ಅಧ್ಯಕ್ಷ ವಿ.ಕೆ.ಸಕ್ಸೇನಾ ಸಲ್ಲಿಸಿದ್ದ ಪ್ರತಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ವಿಚಾರಣೆಗೆ ಗೈರುಹಾಜರಾಗಿರುವ ಬಗ್ಗೆ ಎಚ್ಚರಿಕೆ ನೀಡಿರುವ ನ್ಯಾಯಾಲಯ, ಆಕೆಯ ವಿರುದ್ಧ ಹೊರಡಿಸಲಾಗಿದ್ದ ಜಾಮೀನುರಹಿತ ವಾರಂಟನ್ನು ರದ್ದುಗೊಳಿಸಿದೆ.

ವಿಚಾರಣೆಗೆ ಹಾಜರಾಗದಿರುವ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದ್ದ ನ್ಯಾಯಾಲಯ, ಗೈರು ಹಾಜರಾತಿಗೆ ಆಕೆ ನೀಡಿರುವ ಕಾರಣ ತೃಪ್ತಿದಾಯಕವಾಗಿಲ್ಲದ ಕಾರಣ ಮೇ 29ರಂದು ಮೇಧಾ ವಿರುದ್ಧ ಜಾಮೀನುರಹಿತ ವಾರಂಟನ್ನು ಹೊರಡಿಸಿತ್ತು.

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರಣ ರೈಲು ಟಿಕೆಟ್ ಮುಂಗಡ ಕಾದಿರಿಸಿ ದಿಲ್ಲಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಮೇಧಾ ಪಾಟ್ಕರ್ ನ್ಯಾಯಾಲಯಕ್ಕೆ ತಿಳಿಸಿದ್ದರು.

   ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರಕರಣವು ಕಾನೂನುಕ್ರಮ ಕೈಗೊಳ್ಳುವ ಹಂತದಲ್ಲಿರುವ ಕಾರಣ ಆರೋಪಿಗಳು ವಿಚಾರಣೆಗೆ ಹಾಜರಿರುವುದು ಕಡ್ಡಾಯವಾಗಿದೆ. ಆದ್ದರಿಂದ ದಿಲ್ಲಿಗೆ ಆಗಮಿಸಿ ನ್ಯಾಯಾಲಯದೆದುರು ಹಾಜರಾಗಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿತ್ತು.

  ‘ಆರೋಪಿ ತಿಳಿಸಿದ ಕಾರಣ ಮತ್ತು ಪ್ರಕರಣದ ವಾಸ್ತವಾಂಶ ಗಮನಿಸಿ ಆಕೆಯ ವಿರುದ್ಧ ದಾಖಲಾಗಿರುವ ಜಾಮೀನುರಹಿತ ವಾರಾಂಟ್ ರದ್ದುಗೊಳಿಸಲಾಗಿದೆ. ಈ ಆದೇಶದ ಪ್ರತಿಯನ್ನು ಸಂಬಂಧಿತ ಪೊಲೀಸ್ ಠಾಣೆಗೆ ಕಳುಹಿಸಬೇಕು. ಅಲ್ಲದೆ ಮುಂದಿನ ದಿನದಲ್ಲಿ ಎಚ್ಚರಿಕೆಯಲ್ಲಿ ಇರುವಂತೆ ಆರೋಪಿಗೆ ತಿಳಿಸಲಾಗಿದೆ ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಕ್ರಾಂತ್ ಆದೇಶಶದಲ್ಲಿ ತಿಳಿಸಿದ್ದಾರೆ.

  ಅಹ್ಮದಾಬಾದ್ ಮೂಲದ ಎನ್‌ಜಿಒ ಸಂಸ್ಥೆಯ ಅಧ್ಯಕ್ಷ ವಿ.ಕೆ.ಸಕ್ಸೇನಾ ಹಾಗೂ ಮೇಧಾ ಪಾಟ್ಕರ್ ಮಧ್ಯೆ ಕಳೆದ ಸುಮಾರು 17 ವರ್ಷಗಳಿಂದ ಕಾನೂನು ಸಮರ ನಡೆಯುತ್ತಿದೆ. ನರ್ಮದಾ ಬಚಾವೋ ಆಂದೋಲನ ಮತ್ತು ತನ್ನ ವಿರುದ್ಧ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದು ಸಕ್ಸೇನಾ ವಿರುದ್ಧ ಮೇಧಾ ದೂರು ನೀಡಿದ್ದರು ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಕ್ಸೇನಾ ಆಕೆಯ ವಿರುದ್ಧ ಮಾನನಷ್ಟ ಪ್ರಕರಣದ ಎರಡು ಮೊಕದ್ದಮೆ ದಾಖಲಿಸಿದ್ದರು.

ಆದರೆ ವಿಚಾರಣೆಗೆ ಹಾಜರಾಗದ ಬಗ್ಗೆ ನ್ಯಾಯಾಲಯ 2015ರಲ್ಲಿ ಮೇಧಾಗೆ 3,000 ರೂ.ದಂಡ ವಿಧಿಸಿತ್ತು ಮತ್ತು ನ್ಯಾಯಾಲಯದೆದುರು ಹಾಜರಾಗಲು ಅಂತಿಮ ಅವಕಾಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News