×
Ad

ಇದು 60 ವರ್ಷಗಳಲ್ಲಿ ಹೊಸ ಬಳೆ ಧರಿಸದ, ಬಿರಿಯಾನಿ ಮಾಡಿರದ ಮೊದಲ ಈದ್

Update: 2017-06-26 19:25 IST

ಹೊಸದಿಲ್ಲಿ,ಜೂ.26: ಹರ್ಯಾಣದ ಬಲ್ಲಭಗಢದ ಖಂದವಾಲಿ ಗ್ರಾಮದಲ್ಲಿ ಸೋಮವಾರ ರಮಝಾನ್ ಆಚರಣೆ ಎಂದಿನಂತಿರಲಿಲ್ಲ. ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದ, ಬಿಳಿಯ ಕುರ್ತಾ-ಪೈಜಾಮ್‌ಗಳಲ್ಲಿದ್ದ ಪುರುಷರು ಪ್ರಾರ್ಥನೆ ಗಳನ್ನು ಸಲ್ಲಿಸಲು ಗ್ರಾಮದ ಈದ್ಗಾಕ್ಕೆ ತೆರಳುತ್ತಿದ್ದಾಗ ಈ ಬಾರಿಯ ಈದ್ ಸಪ್ಪೆಯಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

ಮಹಿಳೆಯರು ಸೇರಿದಂತೆ ಗ್ರಾಮದಲ್ಲಿ ಹೆಚ್ಚಿನವರು ಹೊಸಬಟ್ಟೆಗಳನ್ನು ಧರಿಸುವ ಗೋಜಿಗೇ ಹೋಗಿರಲಿಲ್ಲ. ಯಾವಾಗಲೂ ಈದ್ ದಿನದಂದು ಗ್ರಾಮವಿಡೀ ಪಸರಿಸಿರುತ್ತಿದ್ದ ಬಿರ್ಯಾನಿಯ ಪರಿಮಳ ಈ ಬಾರಿ ಇರಲಿಲ್ಲ.

‘‘ಈದ್ ಎಂದರೇ ಸಂಭ್ರಮಾಚರಣೆ. ಆದರೆ ಈ ಗ್ರಾಮದಲ್ಲಿ ಯಾವುದೇ ಸಂಭ್ರಮ ವಿಲ್ಲ. ಜುನೈದ್‌ನ ಕುಟುಂಬ ದುಃಖದಲ್ಲಿರುವಾಗ ನಾವು ಈದ್‌ನ್ನು ಸಂಭ್ರಮದಿಂದ ಆಚರಿಸುವುದು ಹೇಗೆ ಸಾಧ್ಯ? ಹಾಗೆ ಮಾಡುವುದು ಪಾಪವಾಗುತ್ತದೆ. ನಾವೆಲ್ಲ ಒಗ್ಗಟ್ಟಿನಿಂದ ಆ ದುಃಖತಪ್ತ ಕುಟುಂಬದೊಂದಿಗಿದ್ದೇವೆ ’’ಎಂದು ಪ್ರಾರ್ಥನೆಗೆ ತೆರಳುತ್ತಿದ್ದ ಸ್ಥಳೀಯ ನಿವಾಸಿ ಮುಹಮ್ಮದ್ ಇರ್ಫಾನ್ ಸುದ್ದಿಗಾರರಿಗೆ ತಿಳಿಸಿದರು.

 ಜುನೈದ್ ಮತ್ತು ಆತನ ಸೋದರರು ಜೂ.22ರಂದು ದಿಲ್ಲಿಯ ಸದರ್ ಬಝಾರ್‌ನಲ್ಲಿ ಈದ್ ಖರೀದಿ ಮುಗಿಸಿಕೊಂಡು ರೈಲಿನಲ್ಲಿ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಅವರೊಂದಿಗೆ ವಾಗ್ವಾದಕ್ಕಿಳಿದು ಗೋಮಾಂಸ ಭಕ್ಷಕರು ಎಂದು ನಿಂದಿಸಿ ಚೂರಿಗಳಿಂದ ಇರಿದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಜುನೈದ್ ಎರಡು ಗಂಟೆಗಳ ಬಳಿಕ ರೈಲಿನಲ್ಲಿಯೇ ಕೊನೆಯುಸಿರೆಳೆದಿದ್ದ.

 ಈದ್ ಪ್ರಾರ್ಥನೆಗೆ ಇಷ್ಟೊಂದು ಕಡಿಮೆ ಜನರು ಸೇರಿದ್ದನ್ನು ತಾನು ಈವರೆಗೆ ಕಂಡಿರಲಿಲ್ಲ. ಸಾಮಾನ್ಯವಾಗಿ ಈದ್ ದಿನದಂದು ಇಲ್ಲಿ ನಿಂತುಕೊಳ್ಳಲೂ ಜಾಗವಿರು ವುದಿಲ್ಲ. ಆದರೆ ಇಂದು ಈದ್ಗಾ ಖಾಲಿಖಾಲಿಯಾಗಿದೆ. ಈ ವರ್ಷ ಸಂಪೂರ್ಣ ಭಿನ್ನವಾಗಿ ದೆ ಎಂದು ಗ್ರಾಮದ ಇನ್ನೋರ್ವ ನಿವಾಸಿ ಅಷ್ರಫ್ ಹೇಳಿದರು.

ಗ್ರಾಮದ ಪುರುಷರು ಒಬ್ಬೊಬ್ಬರಾಗಿ ನಮಾಝ್‌ಗೆ ತೆರಳುತ್ತಿದ್ದರೆ ಮಹಿಳೆಯರು ಜುನೈದ್‌ನ ದುಃಖತಪ್ತ ತಾಯಿ ಸೈರಾ ಒಂಟಿಯಾಗಿರದಂತೆ ನೋಡಿಕೊಳ್ಳಲು ಆಕೆಯ ಮನೆಯ ಬಳಿ ಸೇರಿದ್ದರು. ಸೈರಾ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದರೆ, ಎದ್ದು ಸ್ನಾನ ಮಾಡಿ ಪ್ರಾರ್ಥನೆಗಳನ್ನು ಸಲ್ಲಿಸುವಂತೆ ಆಕೆಯ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಕಳೆದೆರಡು ದಿನಗಳಿಂದ ಆಕೆ ಅದೇ ಬಟ್ಟೆಗಳಲ್ಲಿ ಬಿದ್ದುಕೊಂಡಿದ್ದಾಳೆ. ಊಟವನ್ನೂ ಮಾಡಿಲ್ಲ ಎಂದು ಗ್ರಾಮದ ನಿವಾಸಿ ಶಬಾನಾ ಹೇಳಿದರು.

ಇದು 60 ವರ್ಷಗಳಲ್ಲಿ ನಾನು ಹೊಸಬಳೆಗಳನ್ನು ಧರಿಸಿರದ, ಬಿರಿಯಾನಿ ಮಾಡಿರದ ಮೊದಲ ಈದ್ ಆಗಿದೆ. ಹಬ್ಬದ ಸಂಂಕೇತವಾಗಿ ಬೆಳಗ್ಗೆ ಎದ್ದು ಏನಾದರೂ ಸಿಹಿ ತಯಾ ರಿಸಲು ಪ್ರಯತ್ನಿಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ಜುನೈದ್ ನಮ್ಮೆಂದಿಗಿಲ್ಲ ಎಂದು ಯೋಚಿಸಲೂ ನನಗೆ ಸಾಧ್ಯವಾಗುತ್ತಿಲ್ಲ ಎಂದು ಆತನ ಚಿಕ್ಕಮ್ಮ ಮಕ್ಸೂದಾ ಸುದ್ದಿಗಾರರಿಗೆ ತಿಳಿಸಿದರು.

 ಇಷ್ಟಾದ ಬಳಿಕ ಆಕೆ ಸೈರಾರನ್ನು ಎತ್ತಿ ಕುಳ್ಳಿರಿಸಿ ಆಕೆಯ ಕೈಗೆ ಕುರ್ ಆನ್ ನೀಡಿದರು. ಏಳು,ಮುಖ ತೊಳೆದುಕೊಂಡು ಪ್ರಾರ್ಥನೆಗಳನ್ನು ಸಲ್ಲಿಸು. ನೀನು ಈದ್ ದಿನದಂದು ಪ್ರಾರ್ಥನೆಗಳನ್ನು ಮಾಡದಿರಲು,ತನ್ಮೂಲಕ ಅಲ್ಲಾಹ್‌ಗೆ ಅಗೌರವ ತೋರಿಸಲು ಸಾಧ್ಯವಿಲ್ಲ. ಮತ್ತು ವಚನಗಳನ್ನು ಓದುವಾಗ ಅಳಬೇಡ ಎಂದು ಆಕೆ ಕೊಂಚ ಕಠಿಣವಾಗಿಯೇ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News