ಸಿಕ್ಕಿಂನಲ್ಲಿ ಗಡಿದಾಟಿ ಬಂದ ಚೀನೀ ಪಡೆ: ಭಾರತದ ಎರಡು ಸೇನಾ ಬಂಕರ್ ನಾಶ
ಹೊಸದಿಲ್ಲಿ, ಜೂ.26: ಚೀನಾದ ಪಡೆಗಳು ಮತ್ತೊಮ್ಮೆ ಭಾರತದ ಗಡಿ ಉಲ್ಲಂಘಿಸಿವೆ. ಸಿಕ್ಕಿಂ ವಿಭಾಗದಲ್ಲಿ ಗಡಿದಾಟಿ ಬಂದ ಚೀನೀ ಪಡೆಗಳು ಭಾರತದ ಯೋಧರೊಂದಿಗೆ ಸೆಣಸಾಟ ನಡೆಸಿತಲ್ಲದೆ ಭಾರತೀಯ ಸೇನೆಯ ಎರಡು ಬಂಕರ್‌ಗಳನ್ನು ನಾಶಗೊಳಿಸಿದೆ.
ಎರಡೂ ದೇಶಗಳ ಪಡೆಗಳ ನಡುವೆ ಮುಖಾಮುಖಿ ಪೂರ್ವ ಸಿಕ್ಕಿಂನ ಡೋಕಾ ಲ ಪ್ರದೇಶದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದೆ. ಅಲ್ಲದೆ ಕೈಲಾಸ ಮಾನಸ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೂ ಚೀನಾದ ಪಡೆಗಳು ತಡೆಯೊಡ್ಡಿದ್ದವು ಎಂದು ಮೂಲಗಳು ತಿಳಿಸಿವೆ.
ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಮಾನವ ಗೋಡೆಯನ್ನು ನಿರ್ಮಿಸುವ ಮೂಲಕ ಭಾರತೀಯ ಭೂಪ್ರದೇಶದೊಳಗೆ ಚೀನೀ ಪಡೆಗಳು ಮತ್ತಷ್ಟು ಮುಂದುವರಿಯುವುದನ್ನು ತಡೆಯಲು ಭಾರತದ ಪಡೆಗಳು ಪ್ರಯತ್ನ ಮುಂದುವರಿಸಿವೆ.
ಡೋಕಾ ಲ ಪ್ರದೇಶದ ಲಾಲ್ತೆನ್ ಎಂಬಲ್ಲಿ ಭಾರತೀಯ ಸೇನೆಯ ಎರಡು ಬಂಕರ್‌ಗಳನ್ನು ನಾಶಗೊಳಿಸಲಾಗಿದೆ.ಜೂನ್ 20ರಂದು ಎರಡೂ ಪಡೆಗಳ ಹಿರಿಯ ಸೇನಾಧಿಕಾರಿಗಳ ಮಧ್ಯೆ ಧ್ವಜ ಮಾತುಕತೆ ನಡೆದಿದ್ದರೂ ಪ್ರದೇಶದಲ್ಲಿ ಉದ್ವೇಗದ ಪರಿಸ್ಥಿತಿ ಮುಂದುವರಿದಿದೆ.
ಸಿಕ್ಕಿಂ- ಭೂತಾನ್-ಟಿಬೆಟ್ ಈ ಮೂರು ಪ್ರದೇಶಗಳ ಸಂಗಮ ಸ್ಥಳವಾಗಿರುವ ಡೋಕ ಲ ದಲ್ಲಿ ಈ ಹಿಂದೆಯೂ ಕೆಲವು ಬಾರಿ ಗಡಿ ಉಲ್ಲಂಘನೆಯ ಘಟನೆ ನಡೆದಿದೆ. 2008ರ ನವೆಂಬರ್‌ನಲ್ಲಿ ಚೀನಾದ ಪಡೆಗಳು ಇದೇ ಸ್ಥಳದಲ್ಲಿದ್ದ ಭಾರತೀಯ ಸೇನೆಯ ತಾತ್ಕಾಲಿಕ ಬಂಕರ್‌ಗಳನ್ನು ನಾಶಗೊಳಿಸಿದ್ದವು.