ಕೈಲಾಸ ಯಾತ್ರೆಗೆ ಅನುಮತಿ ನಿರಾಕರಣೆ ವಿವಾದ: ಭಾರತದೊಂದಿಗೆ ಮಾತುಕತೆ; ಚೀನಾ

Update: 2017-06-26 15:19 GMT

ಬೀಜಿಂಗ್,ಜೂ.26: ಭಾರತೀಯ ಯಾತ್ರಿಕರಿಗೆ ಟಿಬೆಟ್‌ನಲ್ಲಿರುವ ಕೈಲಾಸ ಮಾನಸ ಸರೋವರಕ್ಕೆ ತಾನು ಪ್ರವೇಶ ನಿರಾಕರಿಸಿರುವ ಬಗ್ಗೆ ಭಾರತದ ಜೊತೆ ಮಾತುಕತೆ ನಡೆಸುತ್ತಿರುವುುದಾಗಿ ಚೀನಾ ಸೋಮವಾರ ತಿಳಿಸಿದೆ.

 ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಸುಹಾಂಗ್ ಈ ಬಗ್ಗೆ ಬೀಜಿಂಗ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ‘‘ ನನಗೆ ಗೊತ್ತಿರುವ ಮಾಹಿತಿ ಪ್ರಕಾರ, ಎರಡೂ ಸರಕಾರಗಳು ಈ ವಿಷಯವಾಗಿ ಚರ್ಚಿಸುತ್ತಿವೆ’’ ಎಂದು ತಿಳಿಸಿದ್ದಾರೆ. ಆದರೆ ಭೂಕುಸಿತ ಹಾಗೂ ಭಾರೀ ಮಳೆಯಂತಹ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಭಾರತೀಯ ಯಾತ್ರಿಕರಿಗೆ ಕೈಲಾಸ ಮಾನಸ ಸರೋವರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆಯೇ ಎಂಬ ಬಗ್ಗೆ ಅವರು ಯಾವುದೇ ವಿವರಣೆ ನೀಡಿಲ್ಲ.

 ಚೀನಾ ಸರಕಾರವು ಕಳೆದ ವಾರ ಸಿಕ್ಕಿಂನ ನಾಥು ಲಾ ಪಾಸ್ ಮಾರ್ಗವಾಗಿ ಟಿಬೆಟ್‌ನಲ್ಲಿರುವ ಕೈಲಾಸ ಮಾನಸಸರೋವರಕ್ಕೆ ತೆರಳುತ್ತಿದ್ದ 47 ಮಂದಿ ಭಾರತೀಯ ಯಾತ್ರಿಕರಿಗೆ ಪ್ರವೇಶವಕಾಶವನ್ನು ನಿರಾಕರಿಸಿತ್ತು.

   ಈ ಯಾತ್ರಿಕರು ಜೂನ್ 19ರಂದು ಚೀನಾದ ಗಡಿಯನ್ನು ದಾಟಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಅವರಿಗದು ಸಾಧ್ಯವಾಗಿರಲಿಲ್ಲ. ಬೇಸ್‌ಕ್ಯಾಂಪ್‌ನಲ್ಲಿಯೇ ಸಮಯಕಳೆದ ಅವರು ಜೂನ್ 23ರಂದು ಮತ್ತೆ ಗಡಿದಾಟಲು ಪ್ರಯತ್ನಿಸಿದ್ದರು. ಆದರೆ ಅವರಿಗೆ ಚೀನಿ ಅಧಿಕಾರಿಗಳು ಪ್ರವೇಶಾನುಮತಿ ನಿರಾಕರಿಸಿದ್ದರು.

ಈ ಹೊಸ ಬೆಳವಣಿಗೆಯಿಂದಾಗಿ ವಾರ್ಷಿಕ ಕೈಲಾಸ ಮಾನಸ ಸರೋವರ ಯಾತ್ರೆಯ ಮೇಲೆ ಅನಿಶ್ಚಿತತೆಯ ಕರಿನೆರಳು ಕವಿದಿದೆ. ಕೈಲಾಸ ಮಾನಸಸರೋರವಕ್ಕೆ ತೆರಳುವ ರಸ್ತೆ ಹಾಳಾಗಿರುವುದರಿಂದ ಭಾರತೀಯ ಯಾತ್ರಿಕರಿಗೆ ಸದ್ಯಕ್ಕೆ ಅಲ್ಲಿಗೆ ಪ್ರಯಾಣಿಸುವುದು ಅಸಾಧ್ಯವೆಂದವರು ಹೇಳಿದ್ದಾರೆ.

ಭಾರತೀಯ ಪ್ರಯಾಣಿಕರ ಸುರಕ್ಷತೆಯ ಕುರಿತ ಆತಂಕದ ಹಿನ್ನೆಲೆಯಲ್ಲಿ ಅವರ ಮುಂದಿನ ಪ್ರಯಾಣಕ್ಕೆ ಅನಮತಿ ನಿರಾಕರಿಸಲಾಗಿದೆಯೆಂದು ಚೀನಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News